ನಾಗೇಂದ್ರ ವಿರುದ್ಧ ಬಿಜೆಪಿ ಅಪಪ್ರಚಾರ

ರಾಮ್‌ಪ್ರಸಾದ್
ರಾಮ್‌ಪ್ರಸಾದ್
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಟಿ ತನಿಖೆಯಲ್ಲಿ ಕ್ಲೀನ್‌ಚಿಟ್

ಬಳ್ಳಾರಿ :

ಸಚಿವ ಬಿ.ನಾಗೇಂದ್ರ ಅವರ ವಿರುದ್ಧ ಬಿಜೆಪಿ ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ನಡೆಸುತ್ತಿದೆ ಎಂದು ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಾಮ್‌ಪ್ರಸಾದ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ಹಗರಣದಲ್ಲಿ ಕೇವಲ ಆರೋಪಿ ಮಾತ್ರ, ಅಪರಾಧಿಯಲ್ಲ. ಅಲ್ಲದೇ, ಈಗಾಗಲೇ ಅವರಿಗೆ ಎಸ್‌ಐಟಿ ತನಿಖೆಯಲ್ಲಿ ಕ್ಲೀನ್‌ಚಿಟ್ ದೊರೆತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ನಾಗೇಂದ್ರ ಅವರು ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಎರಡು ಬಾರಿ ಸೋಲಿಸಿರುವುದನ್ನು ಬಿಜೆಪಿ ಸಹಿಸಿಕೊಳ್ಳಲಾಗದೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಾಗ ಸುಳ್ಳು ಆರೋಪಗಳ ಮೂಲಕ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಯಾವ ರಾಜಕಾರಣಿಯ ಮೇಲೆ ಪ್ರಕರಣಗಳಿಲ್ಲ? ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧ ಪ್ರಕರಣಗಳಿವೆ. ಪ್ರಕರಣವಿರುವುದೇ ಅಪರಾಧ ಸಾಬೀತಾದಂತಲ್ಲ. ನಾಗೇಂದ್ರ ಅವರ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯವೇ ತೀರ್ಮಾನಿಸಲಿದೆ. ಆದರೆ, ಬಿಜೆಪಿ ನಾಯಕರು ನ್ಯಾಯಾಲಯದ ವಿಚಾರಣೆಯ ವಿಚಾರವನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಆ.17ರಂದು ಹಮ್ಮಿಕೊಂಡಿರುವ ಹೋರಾಟಕ್ಕೆ ಪ್ರತಿಯಾಗಿ, ವಾಲ್ಮೀಕಿ ಸಮುದಾಯ ಉತ್ತರ ನೀಡಲು ಸಿದ್ಧವಿದೆ. ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ. ನಾಗೇಂದ್ರ ಅವರ ವಿರುದ್ಧ ರಾಜಕೀಯ ಕಾರಣಕ್ಕಾಗಿ ನಡೆಯುತ್ತಿರುವ ಆರೋಪಗಳಿಗೆ ವಾಲ್ಮೀಕಿ ಸಮುದಾಯ ಒಗ್ಗಟ್ಟಿನಿಂದ ಪ್ರತಿಕ್ರಿಯಿಸಲಿದೆ ಎಂದು ಎಚ್ಚರಿಸಿದರು. ಪ್ರಮುಖರಾದ ಸಂಗನಕಲ್ ವಿಜಯ್‌ಕುಮಾರ್, ಮುದಿಮಲ್ಲಯ್ಯ, ಜಗನ್ನಾಥ್, ಸತ್ಯನಾರಾಯಣ, ಸೋಮಣ್ಣ, ಜಾನಕಿ, ಅರುಣ್, ರಾಮಕೃಷ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net