ಬಳ್ಳಾರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಕಾರ್ಯಕ್ರಮವನ್ನು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ ಶಿವಶಂಕರೇಗೌಡ ಉದ್ಘಾಟಿಸಿದರು. ನ್ಯಾಯಾಧೀಶೆ ಕೆ.ಜಿ. ಶಾಂತಿ, ಆಯೋಗದ ಜಿಲ್ಲಾಧ್ಯಕ್ಷ ಎನ್. ತಿಪ್ಪೇಸ್ವಾಮಿ, ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಪಿ.ರಾಮಬ್ರಹ್ಮಂ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಕೆ.ಕೋಟೇಶ್ವರ ರಾವ್, ಜೆ.ಎಂ. ಅನಿಲ್ ಕುಮಾರ್ ಇತರರಿದ್ದರು
ಬಳ್ಳಾರಿ : ಸಮಾಜದಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಅತಿ ಹೆಚ್ಚು ವಂಚನೆಗಳು ಆಗುತ್ತಿವೆ. ಈ ಕುರಿತು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ ಶಿವಶಂಕರೇಗೌಡ ಹೇಳಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿನ ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಸಹಯೋಗದೊಂದಿಗೆಆಯೋಜಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತದಲ್ಲಿ ಗ್ರಾಹಕರಿಗಿರುವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿಯಾದ ಪ್ರಕರಣಗಳ ಇತ್ಯರ್ಥದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ 34 ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಿದ್ದು, ಗ್ರಾಹಕರ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕಾಗಿ ಹಂತ-ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಮಧ್ಯಸ್ಥಿಕೆ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಗ್ರಾಹಕರ ಕುಂದುಕೊರತೆಗಳನ್ನು ನಿಗದಿತ ಅವಧಿಯೊಳಗೆ ಮತ್ತು ಸಾರಾಂಶ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಉಚಿತವಾಗಿ ಪರಿಹಾರ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಮುಖ್ಯ ಉದ್ದೇಶ ಮತ್ತು ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಮಾತನಾಡಿ, ಜಿಲ್ಲಾ ನ್ಯಾಯಾಲಯದಲ್ಲಿ ನುರಿತ ಮಧ್ಯಸ್ಥಿಕೆದಾರರು ಇದ್ದು, ಮಧ್ಯಸ್ಥಿಕೆ ಕೇಂದ್ರಕ್ಕೆ ಬೇಕಾದ ಅಗತ್ಯ ಸಹಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಮಾತನಾಡಿ, ಮಧ್ಯಸ್ಥಿಕೆಯ ಮೂಲಕ ಗ್ರಾಹಕರ ವ್ಯಾಜ್ಯಗಳ ಇತ್ಯರ್ಥ ಪಡಿಸುವಲ್ಲಿ ಜಿಲ್ಲೆಯು ಎರಡನೆ ಸ್ಥಾನದಲ್ಲಿದೆ. ಇದಕ್ಕೆ ವಕೀಲರ ಸಹಕಾರವು ಒಳಗೊಂಡಿದೆ ಎಂದರು. ಬಳಿಕ ಕಾರ್ಯಕ್ರಮದಲ್ಲಿ ರಾಜಿಯಾದಂತಹ ಕಕ್ಷಿದಾರರಿಗೆ ಪರಿಹಾರವಾಗಿ ಚೆಕ್ ವಿತರಿಸಲಾಯಿತು.