ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿಕೆ
ಫ.ಗು.ಹಳಕಟ್ಟಿ ಸಂಸ್ಮರಣೋತ್ಸವ
ಕಂಪ್ಲಿ: ಹಿಂದೂ ಧರ್ಮದಲ್ಲಿನ ಮೂಢನಂಬಿಕೆ, ಅಜ್ಞಾನಗಳಿಗೆ ರೋಸಿ ಹೋದ ಬಸವಾದಿ ಶರಣರನ್ನು ಮತ್ತೆ ಹಿಂದೂ ಧರ್ಮಕ್ಕೆ ಎಳೆಯುವ ಯತ್ನ ಸಾಧುವಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.
ರಾಷ್ಟ್ರೀಯ ಬಸವದಳ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರಿಗೆ ಕಳಂಕ ತರುವ ಕೆಲಸ ಮಾಡುತ್ತಿರುವ ಕೆಲ ಮಠಾಧೀಶರ ನಡೆ ಸರಿಯಲ್ಲ. ಬಸವ ತತ್ವ ವಿಶ್ವಮಾನ್ಯವಾಗಿದ್ದು, ತ್ರಿಕಾಲ ಅನುಕರಣೆಗೆ ಯೋಗ್ಯವಾಗಿವೆ. ಬಸವ ತತ್ವ ಸಿದ್ಧಾಂತ ಮಾನವ ಕುಲಕ್ಕೆ ಲೇಸು ಬಯಸುತ್ತದೆ ಎಂದರು.
ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಮಾತನಾಡಿ, ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಿಸಿ, ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸಿದ್ದಾರೆ. ಬಡತನ, ಆನಾರೋಗ್ಯ ಮತ್ತು ದುಃಖ ಜೀವನಪೂರ್ತಿ ಅವರನ್ನು ಬಾಧಿಸಿದರೂ ಎದೆಗುಂದದೆ ವಚನಗಳ ಸಂರಕ್ಷಣೆಗೆ ಒತ್ತು ನೀಡಿದರು ಎಂದು ತಿಳಿಸಿದರು.
ಪ್ರಮುಖರಾದ ಬಿ.ಎಂ.ರುದ್ರಯ್ಯ, ಅಶೋಕ ಕುಕನೂರು, ಮಡಿವಾಳ ಹುಲುಗಪ್ಪ, ಆದಿಮನೆ ಹೊನ್ನಪ್ಪ, ಮಾ.ಶ್ರೀನಿವಾಸ, ಮರಿಶೆಟ್ರು ಸುರೇಶ, ಕೆ.ಎಂ.ಚನ್ನಬಸವ, ಅಂಬಿಗರ ಮಂಜುನಾಥ, ಎಂ.ವಿ.ಬನ್ನಿಕೊಪ್ಪ, ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.