ಕಂಪ್ಲಿಯಲ್ಲಿ ನೆಲಸಮವಾದ ಬಾಳೆ ಬೆಳೆ

ನಂ.2 ಮುದ್ದಾಪುರ ಗ್ರಾಮದಲ್ಲಿ ಮಳೆ, ಗಾಳಿಗೆ ನೆಲಕ್ಕೊರಗಿದ ಬಾಳೆ.
ನಂ.2 ಮುದ್ದಾಪುರ ಗ್ರಾಮದಲ್ಲಿ ಮಳೆ, ಗಾಳಿಗೆ ನೆಲಕ್ಕೊರಗಿದ ಬಾಳೆ.
Published on
ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಗುಡುಗು, ಸಿಡಿಲು, ಮಿಂಚು ಹಾಗೂ ಜೋರಾದ ಗಾಳಿ ಸಹಿತ 24.1 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ಭತ್ತ ಹಾಗೂ ಬಾಳೆ ಬೆಳೆಗೆ ಮಾರಕವಾಗಿದೆ. ಬಿರುಗಾಳಿಯ ಹೊಡೆತಕ್ಕೆ ಬಾಳೆ ಗಿಡಗಳು ನೆಲಕಚ್ಚಿವೆ. ಅಲ್ಲಲ್ಲಿ ರಾಶಿ ಹಾಕಿದ್ದ ಭತ್ತದ ಫಸಲು ಮಳೆಗೆ ಸಿಲುಕಿ ತೊಯ್ದು ಹೋಗಿದೆ.
ನಂ.2 ಮುದ್ದಾಪುರ, ಶಂಕರಸಿಂಗ್ ಕ್ಯಾಂಪ್, ಬೊಜ್ಜಯ್ಯ ಕ್ಯಾಂಪ್, ಕೊಂಡಯ್ಯ ಕ್ಯಾಂಪ್ ಹಾಗೂ ರಾಮಸಾಗರ ಭಾಗಗಳಲ್ಲಿ ಜಿ9 ಮತ್ತು ಯಾಲಕ್ಕಿ ತಳಿಯ ಬಾಳೆ ತೋಟಗಳು ಭಾಗಶಃ ನೆಲಕ್ಕೊರಗಿವೆ. ಕೆಲವು ರೈತರ ತೋಟಗಳಲ್ಲಿನ ಬಹುಭಾಗದ ಬಾಳೆ ಗಿಡಗಳು ಬಿದ್ದಿವೆ. ರಾತ್ರಿ ಸುರಿದ ಮಳೆಗೆ ನಂ.2 ಮುದ್ದಾಪುರ ಹಾಗೂ ಅರಳಿಹಳ್ಳಿಗಳಲ್ಲಿ ಬಾಳೆ ತೋಟಗಳು ಸಂಪೂರ್ಣ ಹಾಳಾದ ವರದಿ ಬಂದಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದ್ದಾರೆ.
ಮಳೆ ಗಾಳಿಯ ಆರ್ಭಟಕ್ಕೆ ದೇವಸಮುದ್ರದಲ್ಲಿ 4 ಹಾಗೂ ಸೋಮಲಾಪುರದಲ್ಲಿ ಮಿಂಚಿಗೆ ಸಿಲುಕಿ ಒಂದು ವಿದ್ಯುತ್ ಪರಿವರ್ತಕ ಹಾನಿಯಾಗಿದೆ. ಮರ ಬಿದ್ದ ಪರಿಣಾಮ 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕಂಪ್ಲಿ ನಗರ ವ್ಯಾಪ್ತಿಯ ಬೆಳಗೋಡ್ ಹಾಳ್ ಭಾಗದಲ್ಲಿ ನಾಲ್ಕು ಕಂಬಗಳು ಬಿದ್ದಿವೆ. ಮಿಂಚಿನ ಸುಳಿಗೆ ಸಿಲುಕಿ ಒಟ್ಟು 6 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಕಂಪ್ಲಿ ಗ್ರಾಮೀಣ ಭಾಗ ಹಾಗೂ ಮೆಟ್ರಿ ಭಾಗಗಳಲ್ಲಿ ಒಟ್ಟಾರೆಯಾಗಿ 21ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಧರೆಗುರುಳಿವೆ.
ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಕಚೇರಿಯನ್ನು ಕಂಪ್ಲಿಯಲ್ಲಿಯೇ ಆರಂಭಿಸಬೇಕು. ಗುರುವಾರ ರಾತ್ರಿ ಬಿದ್ದ ಮಳೆಗೆ ಬಾಳೆ ನಾಶಗೊಂಡಿದ್ದು, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಬೆಳೆ ಪರಿಹಾರ ಕೊಡಿಸುವಲ್ಲಿ ಮುಂದಾಗಬೇಕು ಎಂದು ಬಿಜೆಪಿ ಬಿಎಲ್ಎ-1 ಜಿ. ಶ್ರೀನಿವಾಸುಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಜೆ.ಎನ್. ಗಣೇಶ್ ಅವರು, ಭತ್ತ, ಬಾಳೆ ಬೆಳೆ ನಾಶಗೊಂಡ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಹಾಗೂ ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net