ಮೇಲ್ದರ್ಜೆಗೇರಲಿ ಆಯುರ್ವೇದ ಚಿಕಿತ್ಸಾಲಯ

ಕಂಪ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹೊರನೋಟ.
ಕಂಪ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹೊರನೋಟ.
Published on
ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ಪಟ್ಟಣದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ರೋಗಿಗಳಿಗೆ ವರದಾನವಾಗಿದೆ. ಈ ಆಸ್ಪತ್ರೆಯನ್ನು ತಾಲೂಕು ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಇದೆ.
ಆಯುರ್ವೇದ ಚಿಕಿತ್ಸಾಲಯದಲ್ಲಿ ನಾನಾ ಚಿಕಿತ್ಸೆಗಳೊಂದಿಗೆ ಪಂಚಕರ್ಮ ಚಿಕಿತ್ಸೆಯೂ ಲಭ್ಯವಿದೆ. ಪಂಚಕರ್ಮ ಚಿಕಿತ್ಸೆಗೆ ಬರುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಚರ್ಮವ್ಯಾಧಿ, ಕೂದಲು ಉದುರುವಿಕೆ, ಮೂಲವ್ಯಾಧಿ, ಉಬ್ಬಿದ ರಕ್ತನಾಳ, ಮಂಡಿ ನೋವು, ಕೀಲು ನೋವು, ಬೊಜ್ಜು, ಅಜೀರ್ಣ, ಆಮ್ಲಪಿತ್ತ, ಸ್ತ್ರೀರೋಗಗಳು, ಮಧುಮೇಹ ಸೇರಿದಂತೆ ನಾನಾ ರೋಗಗಳ ಚಿಕಿತ್ಸೆಗಾಗಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.
ನಿತ್ಯ ಬೆಳಗ್ಗೆ 9ರಿಂದ ಸಂಜೆ 4.30ರ ತನಕ ಹಾಗೂ ರಜಾದಿನಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅಡುಗೆ ಮನೆ ಸದ್ಬಳಕೆ, ಪ್ರಕೃತಿದತ್ತ ಜೀವನ ಶೈಲಿ, ಪ್ರಕೃತಿ ಆಧರಿಸಿ ಆರೋಗ್ಯವಂತರಾಗಲು ಸಲಹೆ ನೀಡಲಾಗುತ್ತಿದೆ.
2017ರಲ್ಲಿ ಕಂಪ್ಲಿ ತಾಲೂಕು ಕೇಂದ್ರವಾಗಿದ್ದರೂ ಆಯುರ್ವೇದ ಚಿಕಿತ್ಸಾಲಯ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಲ್ಲ. ಆಯುರ್ವೇದ ಚಿಕಿತ್ಸಾಲಯವನ್ನು ಆಯುರ್ವೇದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕಿದೆ. ಇದರಿಂದ 10 ಹಾಸಿಗೆ ಆಸ್ಪತ್ರೆಯಾಗಿ ಮಾರ್ಪಾಡು ಆಗಲಿದೆ. ಚಿಕಿತ್ಸಾಲಯದಲ್ಲಿ ಸದ್ಯಕ್ಕೆ ಒಬ್ಬ ವೈದ್ಯ ಹಾಗೂ ಸ್ತ್ರೀ ಮಸಾಜ್ ಥೆರಾಪಿಸ್ಟ್ ಇದ್ದಾರೆ. ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಇಬ್ಬರು ತಜ್ಞ ವೈದ್ಯರು, ತಲಾ ಇಬ್ಬರು ಪುರುಷ ಮತ್ತು ಸ್ತ್ರೀ ಮಸಾಜ್ ಥೆರಾಪಿಸ್ಟ್‌ಗಳು, ಒಬ್ಬ ಔಷಧ ವಿತರಕ, ಒಬ್ಬ ಶುಶ್ರೂಷಾಧಿಕಾರಿ, ಇಬ್ಬರು ಡಿ ಗ್ರೂಪ್ ನೌಕರರ ಹುದ್ದೆಗಳು ಲಭ್ಯವಾಗಲಿವೆ. ಸದ್ಯಕ್ಕೆ ಸ್ತ್ರೀ ಮಸಾಜ್ ಥೆರಾಪಿಸ್ಟ್ ಇರುವುದರಿಂದ ಪುರುಷರಿಗೆ ಪಂಚಕರ್ಮ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಈಗಿರುವ ಮಸಾಜ್ ಥೆರಾಪಿಸ್ಟ್ ಮಹಿಳೆಯರು ಹಾಗೂ ವೃದ್ಧ ಪುರುಷರಿಗೆ ಪಂಚಕರ್ಮ ಚಿಕಿತ್ಸೆ ನೀಡುತ್ತಿದ್ದಾರೆ.
"

ಕಂಪ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು, ಈಗಿರುವ ಕಟ್ಟಡವನ್ನು ಹಸ್ತಾಂತರಿಸುವಂತೆ ಇಲ್ಲವೇ ಹೊಸದಾಗಿ ನಿವೇಶನ ನೀಡುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು. ಇದರಿಂದ ಗುಣಮಟ್ಟದ ಆಯುರ್ವೇದ ಸೇವೆ ನೀಡಲು ಸಾಧ್ಯ.

"

ಆಯುರ್ವೇದ ಚಿಕಿತ್ಸಾಲಯವನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಕಟ್ಟಡವನ್ನು ಆಯುಷ್ ಇಲಾಖೆಗೆ ಹಸ್ತಾಂತರಿಸಬೇಕಿದೆ. ಇಲ್ಲವೇ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಪ್ರತ್ಯೇಕ ನಿವೇಶನ ನೀಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net