ಬಳ್ಳಾರಿ : ಏಡ್ಸ್ ರೋಗಕ್ಕೆ ಸಂಪೂರ್ಣ ಗುಣಮುಖ ಮಾಡುವ ಔಷಧ ಇನ್ನೂ ಲಭ್ಯವಿಲ್ಲದ ಕಾರಣ, ಮುನ್ನೆಚ್ಚರಿಕೆ ಮತ್ತು ಜಾಗೃತಿಯೇ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಎಚ್‌ಐವಿ ಮತ್ತು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಜಿಲ್ಲೆಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅವರಿಗೆ ಸೂಕ್ತ ತರಬೇತಿ ನೀಡಿ, ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಲೈಂಗಿಕ ಕಾರ್ಯಕರ್ತೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಇಂತಹ ರೋಗಗಳ ಭೀತಿಯಿಂದ ಮತ್ತು ದುರ್ಬಲತೆಯಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸೂಕ್ತ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಬೇಕು ಎಂದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಕುರಿತಾದ ಮುಜುಗರವನ್ನು ಹೋಗಲಾಡಿಸಲು ಪ್ರಬಂಧ ಸ್ಪರ್ಧೆ, ಜಾನಪದ ನೃತ್ಯ, ಬೀದಿ ನಾಟಕ ಹಾಗೂ ಫ್ಲಾಶ್ ಮಾಬ್‌ಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ಘಟಕದ ನಿಯಂತ್ರಣಾಧಿಕಾರಿ ಡಾ.ವಿ.ಇಂದ್ರಾಣಿ ಮಾತನಾಡಿ, ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ 2019 ರಿಂದ 2026 ರವರೆಗಿನ ಅವಧಿಯಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಗಳ ತಪಾಸಣೆಯಿಂದ ಒಟ್ಟು 115 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು 115 ಪ್ರಕರಣಗಳ ಪೈಕಿ 37 ಜನರನ್ನು ಹೆಚ್ಚಿನ ತಪಾಸಣೆ ಮತ್ತು ಕೌನ್ಸೆಲಿಂಗ್‌ಗಾಗಿ ಐಸಿಟಿಸಿ ಕೇಂದ್ರಗಳಿಗೆ ಶಿಫಾರಸು ಮಾಡಲಾಗಿದೆ. ಬಾಕಿ ಉಳಿದಿರುವ 78 ಪ್ರಕರಣಗಳ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡುವುದು ಆರೋಗ್ಯ ಇಲಾಖೆಯ ಮುಂದಿರುವ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಮೈಕ್ರೋ ಲೆವೆಲ್ ಪ್ಲಾನ್ ರೂಪಿಸಲಾಗಿದೆ. ಜೆಎಸ್‌ಡಬ್ಲೂೃ ಸಂಸ್ಥೆಯ ಸಹಯೋಗದೊಂದಿಗೆ ಆ.7 ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಲಾರಿ ಚಾಲಕರಿಗಾಗಿ ಅಮೃತ ಪ್ರಾಜೆಕ್ಟ್ ಅಡಿಯಲ್ಲಿ ಐಸಿಟಿಸಿ ಕೇಂದ್ರಗಳೊಅದಿಗೆ ಟೈ-ಅಪ್ ಮಾಡಿಕೊಂಡು ನಿಯಮಿತ ಪರೀಕ್ಷೆ ನಡೆಸಲಾಗುತ್ತಿದೆ. ಉದ್ಯೋಗಕ್ಕಾಗಿ 5-6 ತಿಂಗಳು ಅಥವಾ ವರ್ಷಗಟ್ಟಲೆ ಕುಟುಂಬದಿಂದ ದೂರವಿರುವ ವಲಸೆ ಕಾರ್ಮಿಕರನ್ನು ಗುರುತಿಸಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.