ಹರಪನಹಳ್ಳಿ: ಧಾರ್ಮಿಕ ಆಚರಣೆಗಳ ಹಿಂದೆ ವೈಚಾರಿಕತೆ ಅಡಗಿದ್ದು, ಕುಂಭಮೇಳದಿಂದ ಸುಭಿಕ್ಷಾ ಮಳೆ, ಸಮೃದ್ಧ ಬೆಳೆ ಬರುತ್ತದೆ ಎಂದು ರಾಮಘಟ್ಟ ಉಚ್ಚಂಗಿದುರ್ಗ ಕಟ್ಟೆಮನೆ ರಾಜಗುರು ರೇವಣಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಜಂಗಮ ತುಂಬಿಗೆರೆ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ನಡೆದ ಭೋಗೇಶ್ವರ ಸ್ವಾಮೀಜಿ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂಪ್ಯೂಟರ್ ಯುಗದಲ್ಲಿ ಮಾನಸಿಕ ಒತ್ತಡದಿಂದ ಬದುಕುತಿದ್ದೇವೆ. ಪೂಜೆ, ಪುನಸ್ಕಾರಗಳಿಂದ ಒತ್ತಡ ನಿವಾರಣೆಯಾಗಿ ಬದುಕಿಗೆ ಶಾಂತಿ ಪ್ರಾಪ್ತಿಯಾಗಲಿದೆ. ಅವನತಿಯತ್ತ ಸಾಗುತ್ತಿರುವ ಮಠ, ದೇವಸ್ಥಾನಗಳು ಪುನರುಜ್ಜೀವನಗೊಳ್ಳಬೇಕು. ಅಭಿವೃದ್ಧಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಕಾರ್ಯಗಳು ಮುಖ್ಯ ಎಂದರು.
ಜಂಗಮ ತುಂಬಿಗೆರೆಯ ತಪಯೋಗಿ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಾಮರಸ್ಯ ಬದುಕಿಗೆ ಧಾರ್ಮಿಕ ಆಚರಣೆಗಳು ನಾಂದಿ. ಮುಕ್ತಿಯ ಬದುಕಿಗೆ ಧಾರ್ಮಿಕ ಆಚರಣೆಗಳೇ ತಳಹದಿ ಎಂದು ತಿಳಿಸಿದರು. ಭೊಗೇಶ್ವರ ಸ್ವಾಮಿ ಮೂರ್ತಿಗೆ 108 ಪೂರ್ಣ ಕುಂಭಾಭಿಷೇಕ ನಡೆಯಿತು. ವಿವಿಧ ಜನಪದ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.