ಕಾಂಗ್ರೆಸ್‌ನಲ್ಲಿ ‘ಬೂದಿ ಮುಚ್ಚಿದ ಕೆಂಡ’

ಕಾಂಗ್ರೆಸ್‌ನಲ್ಲಿ ‘ಬೂದಿ ಮುಚ್ಚಿದ ಕೆಂಡ’
ಕಾಂಗ್ರೆಸ್‌ನಲ್ಲಿ ‘ಬೂದಿ ಮುಚ್ಚಿದ ಕೆಂಡ’
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್‌
  • ಕಾರ್ಯಕರ್ತ

* ಕಾರ್ಯಕರ್ತರ ಆಕ್ರೋಶದ ಹೊಗೆ !

* ಮುಂಬರುವ ಚುನಾವಣೆ ಹೊಡೆತ ಭೀತಿ

ಬಳ್ಳಾರಿ : ಒಂದು ದಶಕದ ನಂತರ ಅಭೂತಪೂರ್ವ ಗೆಲುವಿನ ಮೂಲಕ ಕಾಂಗ್ರೆಸ್ ಪಾಲಾಗಿದ್ದ ಗಣಿಜಿಲ್ಲೆಯಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬ ಮಾತು ಕಾರ್ಯಕರ್ತರಲ್ಲಿ ಹರಿದಾಡುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳನ್ನು ಗೆದ್ದು, ಸಂಡೂರು ಉಪಚುನಾವಣೆ ಹಾಗೂ ಲೋಕಸಭೆಯಲ್ಲೂ ವಿಜಯಪತಾಕೆ ಹಾರಿಸಿದ್ದ ಕೈ ಪಡೆಯಲ್ಲಿ ಈಗ ಭಿನ್ನಾಭಿಪ್ರಾಯ ಮೂಡಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಈ ಭರ್ಜರಿ ದಿಗ್ವಿಜಯಕ್ಕೆ ಹಗಲಿರುಳು ಶ್ರಮಿಸಿದ ಕಟ್ಟಾ ಕಾರ್ಯಕರ್ತರು ಈಗ ಶಾಸಕರ ವರ್ತನೆಯಿಂದ ಬೇಸತ್ತು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ನಮ್ಮ ಸಮಸ್ಯೆ ಆಲಿಸುವವರೇ ಇಲ್ಲ ಎಂಬ ಮನೋಭಾವನೆ ಕಾರ್ಯಕರ್ತರಲ್ಲಿ ಮನೆಮಾಡಿದ್ದು, ಪಕ್ಷದೊಳಗಿನ ಅಪಸ್ವರ ಈಗ ಬೀದಿಗೆ ಬರುವ ಹಂತ ತಲುಪಿದೆ.
ಶಾಸಕರ ಅಪ್ತರ ಆಧಿಪತ್ಯ! : ಜಿಲ್ಲೆಯ ಐವರು ಶಾಸಕರ ಕಾರ್ಯವೈಖರಿಯ ಬಗ್ಗೆ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಶಾಸಕರು ಕ್ಷೇತ್ರದ ಜವಾಬ್ದಾರಿ ತಮ್ಮ ಅಪ್ತರಿಗೊಪ್ಪಿಸಿ ಸದಾ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ.
ಇನ್ನೊಬ್ಬ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿ ಹೈಕಮಾಂಡ್ ನಾಯಕರ ಓಲೈಕೆಯಲ್ಲಿ ಕಾರ್ಯನಿರತರಾಗಿದ್ದು, ಕ್ಷೇತ್ರಕ್ಕೆ ಮರೀಚಿಕೆಯಾಗಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಅಪ್ತರಿಗೆ ಮಾತ್ರ ಇವರ ದರ್ಶನ ಭಾಗ್ಯ ಸಿಗುತ್ತಿದೆ. ಮತ್ತೊಬ್ಬ ಶಾಸಕರು ತಮಗೆ ಇಷ್ಟವಿಲ್ಲದವರನ್ನು ಪಕ್ಷದ ಕಟ್ಟಾಳು ಎಂಬುದು ಮರೆತು ದೂರವಿಡುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇಬ್ಬರು ಶಾಸಕರು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ‘ಅಪರೂಪದ ಅತಿಥಿ’ಯಾಗಿದ್ದಾರೆ.
ಇವರೆಲ್ಲರೂ ಯಾವ ಯಾವ ಕ್ಷೇತ್ರದ ಶಾಸಕರು ಯಾರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಸೈಯದ್ ನಾಸೀರ್ ಹುಸೇನ್ ಅವರು ಜಿಲ್ಲೆಯವರೇ ಆಗಿದ್ದರೂ, ನಮ್ಮ ಅಳಲು ಅವರಿಗೆ ತಲುಪುತ್ತಿಲ್ಲ ಎಂಬುದು ಹಿರಿಯ ಕಾರ್ಯಕರ್ತರ ನೋವಿನ ನುಡಿಯಾಗಿದೆ.
ಅಸಮಾಧಾನಿತರ ಗುಪ್ತ ಸಭೆ : ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಅಸಮಾಧಾನಿತ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಈಗಾಗಲೇ ಎರಡ್ಮೂರು ಬಾರಿ ಗುಪ್ತ ಸಭೆ ನಡೆಸಿದ್ದಾರೆ. ಇನ್ನೂ ಕೆಲವರು ಸಭೆ ಹಾಜರಾಗದೆ ಇದ್ದರೂ ಪರೋಕ್ಷವಾಗಿ ಸಭೆಗೆ ಬೆಂಬಲ ನೀಡಿದ್ದಾರೆ. ಜಿಲ್ಲೆಯ ನಾಯಕರ ವಿರುದ್ಧ ರಾಜ್ಯ ನಾಯಕರಿಗೆ ಮತ್ತು ಹೈಕಮಾಂಡ್‌ಗೆ ಒಗ್ಗಟ್ಟಾಗಿ ದೂರು ನೀಡಲು ಮುಂದಾಗಿದ್ದಾರೆ. ಮೇಲ್ನೋಟಕ್ಕೆ ಕಾರ್ಯಕ್ರಮಗಳಲ್ಲಿ ನಾಯಕರು ಆತ್ಮೀಯತೆ ಪ್ರದರ್ಶಿಸುತ್ತಿದ್ದರೂ, ಒಳಗೊಳಗೆ ಅಸಮಾಧಾನದ ಜ್ವಾಲೆ ಹೊತ್ತಿ ಉರಿಯುತ್ತಿದೆ.
ಚುನಾವಣೆ : ಇನ್ನೇನು ಕೆಲವೇ ತಿಂಗಳಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಈ ಆಂತರಿಕ ಕಚ್ಚಾಟ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ‘ಬಕಪಕ್ಷಿ’ಯಂತೆ ಕಾಯುತ್ತಿದೆ. ಕಾರ್ಯಕರ್ತರು ಇದೇ ರೀತಿ ನಿರುತ್ಸಾಹ ತೋರಿದರೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರು, ತಳಮಟ್ಟದ ಕಾರ್ಯಕರ್ತರ ವಿಶ್ವಾಸ ಗಳಿಸದಿದ್ದರೆ, ಕಷ್ಟಪಟ್ಟು ಮರಳಿ ಪಡೆದ ಕೋಟೆ ಉಳಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಕೋಟ್... ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಕುಟುಂಬದಂತೆಯಿದೆ. ಕಾರ್ಯಕರ್ತರು ಯಾರಾದರೂ ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದರೆ ಪಕ್ಷದ ಜಿಲ್ಲೆಗೆ ಕಚೇರಿಗೆ ಬಂದು ಚರ್ಚಿಸಿದರೆ ಬಗೆಹರಿಸಲು ಪ್ರಯತ್ನಿಸಲಾಗುವುದು.
- ಅಲ್ಲಂ ಪ್ರಶಾಂತ್, ಜಿಲ್ಲಾಧ್ಯಕ್ಷ ಕಾಂಗ್ರೆಸ್, ಬಳ್ಳಾರಿ.

ಕೋಟ್... ಕೆಲ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಕೆಲ ಕಾರ್ಯಕರ್ತರು ಜಿಲ್ಲೆಯ ಕೆಲ ಶಾಸಕರ ವಿರುದ್ಧ ಅಸಮಾಧಾನಗೊಂಡು ಈಗಾಗಲೇ ಸಭೆ ನಡೆಸಿದ್ದಾರೆ. ಈ ಬಗ್ಗೆ ರಾಜ ್ಯನಾಯಕರ ಗಮನಕ್ಕೆ ತರಲಾಗುವುದು.
- ಪಿ.ಗಾದೆಪ್ಪ, ಮೇಯರ್, ಮಹಾನಗರ ಪಾಲಿಕೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net