ಹರಪನಹಳ್ಳಿಯಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಪುಣ್ಯಸ್ಮರಣೆ ಹಾಗೂ ಅಂಗನವಾಡಿ ಯೋಜನೆ ಆರಂಭದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉಡುಗೊರೆ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರ್ ಗೌಡ, ಗೌತಮಪ್ರಭು ಇತರರಿದ್ದರು.
ಹರಪನಹಳ್ಳಿ: ಪಾಲಕರು ಒಂದು ಮಗುವಿನ ಪಾಲನೆಗೆ ಪರದಾಡುತ್ತಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ನಿತ್ಯ ಯಾವುದೇ ಬೇಸರವಿಲ್ಲದೆ ಹಲವಾರು ಮಕ್ಕಳ ಪೋಷಣೆ ಮಾಡುತ್ತಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ನಗರದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನ ವತಿಯಿಂದ ಅಯೋಜಿಸಿದ್ದ ಎಂ.ಪಿ.ರವೀಂದ್ರ 7ನೇ ಪುಣ್ಯಸ್ಮರಣೆ ಹಾಗೂ ಅಂಗನವಾಡಿ ಯೋಜನೆ ಆರಂಭದ 50ನೇ ವರ್ಷಾಚರಣೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಕರೊನಾ ಅವಧಿಯಲ್ಲಿ ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು ವೈಯಕ್ತಿಕ ಕುಟುಂಬ ಲೆಕ್ಕಿಸದೆ ಸೈನಿಕರಂತೆ ಜನರ ರಕ್ಷಣೆಗೆ ಹೋರಾಡಿದರು. ಅವರ ಧೈರ್ಯ ಮತ್ತು ವೃತ್ತಿ ನಿಷ್ಠೆ ಮೆಚ್ಚುವಂಥದ್ದು ಎಂದರು.
ಸಹೋದರ ಎಂ.ಪಿ.ರವೀಂದ್ರ ನಮ್ಮನ್ನು ಅಗಲಿ 7 ವರ್ಷಗಳಾಗಿದ್ದು, ಅವರು ಮಾಡಿದ ಸಮಾಜಮುಖಿ ಕೆಲಸಗಳಿಂದ ತಾಲೂಕಿನ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರತ್ನಮ್ಮ ದೊಡ್ಡಬೆಣ್ಣೆ ಮಾತನಾಡಿ, ಇಂದಿರಾ ಗಾಂಧಿ ಅವರು ಮುತುವರ್ಜಿಯಿಂದ ಇಲಾಖೆಗೆ ಚಾಲನೆ ನೀಡಿ ಮಹಿಳೆಯರು ಮತ್ತು ಮಕ್ಕಳ ಸಾವು-ನೋವು ಕಡಿಮೆ ಮಾಡಲು ಶ್ರಮಿಸಿದರು ಎಂದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಅಧ್ಯಕ್ಷೆ ಟಿ.ಬಸಮ್ಮ ಮಾತನಾಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ಸಿಕ್ಕಿದೆ. ಹೋರಾಟದ ಮೂಲಕವೇ ಗೌರವಧನ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದೇವೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯ ಮೈದೂರು ರಾಮಪ್ಪ, , ಅಬ್ದುಲ್ ರಹೀಮಾನ್, ಚಿಕ್ಕೇರಿ ಬಸಪ್ಪ, ಜಯಲಕ್ಷ್ಮೀ, ಉದಯಶಂಕರ್, ಕೂಬಾ ನಾಯ್ಕ, ಜಾಕೀರ್ ಸರ್ಕವಾಸ್, ಇಬ್ರಾಹಿಂ, ಮತ್ತೂರು ಬಸವರಾಜ್, ಗುಡಿ ನಾಗರಾಜ ಇತರರಿದ್ದರು.