ಕೃಷಿ ಮೇಳ

ಅವ್ವಾರು ಮಂಜುನಾಥ
ಅವ್ವಾರು ಮಂಜುನಾಥ
Published on

ಪ್ರಮುಖ ಮುಖ್ಯಾಂಶಗಳು

  • ಬೀಜ ಮತ್ತು ವೈಜ್ಞಾನಿಕ ಬಿತ್ತನೆ ಕುರಿತು
  • ಬೆಳೆ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ
ಬಳ್ಳಾರಿ :ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಡಿಸಿಸಿ) ನೇತೃತ್ವದಲ್ಲಿ ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ ಕುರಿತು ಮೇ26(ಮಂಗಳವಾರ)ದಂದು ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಅವ್ವಾರು ಮಂಜುನಾಥ ಹೇಳಿದರು.
ನಗರದ ಬಿಡಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾಡಳಿತ, ಜಿಪಂ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ನೀರಾವರಿ ಮತ್ತು ಪಶು ಸಂಗೋಪನಾ ಇಲಾಖೆ, ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಎಪಿಎಂಸಿ ವರ್ತಕರ ಸಂಘ, ದಲ್ಲಾಳಿ ವರ್ತಕರ ಸಂಘ, ಕನ್ನಡ ನಾಡು ರೈತ ಸಂಘ, ನಾನಾ ರೈತ ಸಮೂಹದ ಸಹಯೋಗದಲ್ಲಿ ಮೇಳ ನಡೆಯಲಿದೆ ಎಂದರು.
ಹವಾಮಾನ ಬದಲಾವಣೆ, ಮಣ್ಣಿನ ಗುಣಮಟ್ಟ, ಉತ್ತಮ ಉತ್ಪಾದನೆಗಾಗಿ ಅಗತ್ಯವಿರುವ ಬಿತ್ತನೆ ವಿಧಾನಗಳು, ಗುಣಮಟ್ಟದ ಬೀಜ ಬಳಕೆ ಹಾಗೂ ಬೆಳೆ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ರೈತರಿಗೆ ನೇರ ಸಂವಾದದ ಅವಕಾಶವೂ ಕಲ್ಪಿಸಲಾಗಿದ್ದು, ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ತಜ್ಞರು ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೃಷಿ ಪರಿಕರಗಳು, ಗುಣಮಟ್ಟದ ಬೀಜಗಳು, ರಸಗೊಬ್ಬರಗಳು ಮತ್ತು ಆಧುನಿಕ ಕೃಷಿ ಸಾಧನಗಳ ಪ್ರದರ್ಶನವೂ ಮೇಳದಲ್ಲಿ ಇರಲಿದೆ ಎಂದು ವಿವರಿಸಿದರು.
ಮೇಳದ ಮೂಲಕ ರೈತರಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಂಸ್ಥೆಯ ಪದಾಧಿಕಾರಿಗಳಾದ ಎಸ್. ದೊಡ್ಡನಗೌಡ, ಸೊಂತಾ ಗಿರಿಧರ್, ಡಾ.ಮಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಸಿ.ಎಸ್. ಸತ್ಯನಾರಾಯಣ, ತಾಟಕೂರಿ ಶ್ರೀನಿವಾಸರಾವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net