ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಸ್ನೇಹ ಸಮಾಗಮ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಕಾರ್ಯಕ್ರಮವನ್ನು ರಾಯಚೂರು ವಿವಿ ಕುಲಸಚಿವ ಡಾ.ಎ.ಚನ್ನಪ್ಪ ನಂದಿಹಳ್ಳಿ ಉದ್ಘಾಟಿಸಿದರು. ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಬಿ.ರವಿ ಇತರರಿದ್ದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾಹಿತಿ | ಸ್ನೇಹ ಸಮಾಗಮ ಸುವರ್ಣ ಮಹೋತ್ಸವ
ಸಂಡೂರು: ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಲಭಿಸುವ ಅತ್ಯಾಧುನಿಕ ಕೋರ್ಸ್‌ಗಳನ್ನು ಆರಂಭಿಸಿದೆ. ಇಲ್ಲಿ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಸ್ನೇಹ ಸಮಾಗಮ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸೋಮವಾರ ಮಾತನಾಡಿದರು. ಕೋರ್ಸ್‌ಗಳಿಗೆ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂ. ವ್ಯಯಿಸ ಬೇಕಾಗಿದೆ. ಕೇಂದ್ರದಲ್ಲಿ 25 ಸಾವಿರ ರೂ.ಗೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದರು.
ಬೆಂಗಳೂರು ವಿವಿಯಲ್ಲಿನ ಪ್ರಯೋಗದ ಮಾದರಿಯಲ್ಲಿ ಬಿ.ಕಾಂ.ಕೋರ್ಸ್‌ನಲ್ಲಿ ಹೊಸ ವಿಷಯಗಳು ಹಾಗೂ ಬಹುಬೇಡಿಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಇತರ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು. ಗಣಿಗಾರಿಕೆ ಪ್ರದೇಶ ವಾಗಿದ್ದರಿಂದ ಇಲ್ಲಿನ ಬಹುಕಾಲದ ಬೇಡಿಕೆಯಾಗಿರುವ ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲು ಧನಬಾದ್ ಐಐಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳ ಲಾಗುವುದು ಎಂದು ಮಾಹಿತಿ ನೀಡಿದರು.
ರಾಯಚೂರು ವಿವಿ ಕುಲಸಚಿವ ಡಾ.ಎ.ಚನ್ನಪ್ಪ ಉದ್ಘಾಟಿಸಿ ಮಾತನಾಡಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ. ಅದೊಂದು ಜ್ಞಾನದ ದೀವಿಗೆ. ಇಲ್ಲಿನ ಪರಿಸರ ಮತ್ತು ಶಿಕ್ಷಣವೇ ನಮ್ಮ ಏಳಿಗೆಗೆ ಬುನಾದಿ ಎಂದರು. ನಂದಿಹಳ್ಳಿ ಪಿಜಿ ಕೇಂದ್ರದ ಹಳೆಯ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.
ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ ಬಾಣದ್ ಮಾತನಾಡಿದರು. ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಶಶಿಧರ್, ಕನ್ನಡ ವಿಭಾಗದ ಡಾ.ಮಲ್ಲಯ್ಯ, ಅರ್ಥಶಾಸ್ತ್ರ ವಿಭಾಗದ ಡಾ.ಚೌಡಪ್ಪ ನಿರ್ವಸಿದರು.