ಉಪ್ಪಾರಹಳ್ಳಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ಬಾದನಹಟ್ಟಿ ಗುರ‌್ರಪ್ಪ, ಗೊರೇಬಾಳ ಹೊನ್ನೂರಸ್ವಾಮಿ, ಉಡೇದ ತಿಮ್ಮಪ್ಪ, ಗೌಡ್ರು ಹನುಮನಗೌಡ, ಕಂಪ್ಯೂಟರ್ ತಿಮ್ಮಪ್ಪ ಇತರರಿದ್ದರು.
ಕಂಪ್ಲಿ: ಉಪ್ಪಾರಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಲೋಕಾರ್ಪಣೆ ಹಾಗೂ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಶಾಸಕ ಜೆ.ಎನ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ನೂತನ ದಂಪತಿ ಪರಸ್ಪರ ಅರ್ಥೈಸಿಕೊಂಡು ಬಾಳಬೇಕು. ಮಕ್ಕಳಿಗೆ ಲಿಂಗ ತಾರತಮ್ಯರಹಿತ ಶಿಕ್ಷಣ ಒದಗಿಸಿ ಪಾಲನೆ ಮಾಡಬೇಕು. ಗುರುಹಿರಿಯರ ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತಂದೆ-ತಾಯಿ, ಅತ್ತೆ-ಮಾವಂದಿರನ್ನು ಪ್ರೀತಿ, ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಹರಗಿನಡೋಣಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರಿಂದ ಆಂಜನೇಯಸ್ವಾಮಿ ಪ್ರಾಣಪ್ರತಿಷ್ಠಾಪನೆ, ನೂತನ ಗೋಪುರಕ್ಕೆ ಕಲಶಾರೋಹಣ ನೆರವೇರಿತು. ಮೆಟ್ರಿಯ ವೃಷಭೇಂದ್ರಯ್ಯಸ್ವಾಮಿ, ಪಾಪಿನಾಯಕನಹಳ್ಳಿಯ ವಿಶ್ವಾರಾಧ್ಯಸ್ವಾಮಿ, ಮೆಟ್ರಿಯ ಎಚ್.ಎಂ.ವಿದ್ಯಾಧರಸ್ವಾಮಿ, ಎಚ್.ಎಂ.ವಿಶ್ವೇಶ್ವರಯ್ಯಸ್ವಾಮಿ ಪೌರೋಹಿತ್ಯದಲ್ಲಿ ದೇವಸ್ಥಾನ ಲೋಕಾರ್ಪಣೆ, ಪ್ರಾಣಪ್ರತಿಷ್ಠಾಪನೆ ಹಾಗೂ 14 ಜೋಡಿ ಸಾಮೂಹಿಕ ವಿವಾಹ ಜರುಗಿದವು.