ಕ್ರಿಯಾಶೀಲ ಸಾಧಕ’ ಅಭಿನಂದನಾ ಗ್ರಂಥ ಬಿಡುಗಡೆ

ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ‘ದುಡಿತದ ಕ್ರಿಯಾಶೀಲ ಸಾಧಕ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.
ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ‘ದುಡಿತದ ಕ್ರಿಯಾಶೀಲ ಸಾಧಕ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.
Published on
ಸಂಡೂರು: ಸಮಾಜ ಸೇವಕ ಕೆ.ಎಸ್.ಚನ್ನಬಸಪ್ಪ ಅವರು ಕಡು ಬಡತನದಿಂದಾಗಿ ಐದನೇ ತರಗತಿಯವರೆಗೆ ಓದಿದ್ದರೂ ಅಚಲ ನಿರ್ಧಾರ ಮತ್ತು ಪರಿಶ್ರಮದಿಂದ ಬೆಳೆದು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಹೇಳಿದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನೆಹರೂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇಂದ್ರದ ನಿರ್ದೇಶಕ ಡಾ.ರವಿ ಮತ್ತು ಡಾ.ಮಲ್ಲಯ್ಯ ಸಂಡೂರು ಸಂಪಾದಿಸಿರುವ ‘ದುಡಿತದ ಕ್ರಿಯಾಶೀಲ ಸಾಧಕ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲವನ್ನು ಮರೆಯದ ಚನ್ನಬಸಪ್ಪ ಅವರ ವಿನಯವಂತಿಕೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಅವರ ಔದಾರ್ಯ ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಗುಣಗಳಾಗಿವೆ ಎಂದು ತಿಳಿಸಿದರು.
ಕೂಡ್ಲಿಗಿ ಬಿಇಒ ಮೈಲೇಶ್ ಬೇವೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚನ್ನಬಸಪ್ಪ ಅವರ ಬದುಕು ಇಂದಿನ ಯುವ ಪೀಳಿಗೆಗೆ ಶ್ರಮ ಮತ್ತು ಪ್ರಾಮಾಣಿಕತೆಯ ಪಠ್ಯಪುಸ್ತಕದಂತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಬಿ.ರವಿ ಮಾತನಾಡಿ, ಶೂನ್ಯದಿಂದ ಸಾಧನೆಯ ಶಿಖರಕ್ಕೇರಿದ ಕೆ.ಎಸ್.ಚನ್ನಬಸಪ್ಪ ಅವರ ಬದುಕು ಇಂದಿನ ಯುವ ಪೀಳಿಗೆಗೆ ಒಂದು ಮಾದರಿಯಾಗಿದೆ ಎಂದರು.
ಕೆ.ಎಸ್.ಚನ್ನಬಸಪ್ಪ ಶೆಟ್ಟರ್ ಮಾತನಾಡಿ, ಬದುಕಿನ ಕಷ್ಟಗಳನ್ನು ನೋಡಿಯೇ ಎಲ್ಲವನ್ನೂ ಕಲಿತಿದ್ದೇನೆ. ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳುವುದು ಮತ್ತು ಯಾರಿಗೂ ಅನ್ಯಾಯ ಮಾಡದಿರುವುದೇ ಜೀವನದ ಮೂಲಮಂತ್ರವಾಗಿದೆ ಎಂದರು.
ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎಂ.ಶಶಿಧರ, ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ, ಇತಿಹಾಸ ಅಧ್ಯಾಪಕ ಡಾ.ನರಸಿಂಹಮೂರ್ತಿ, ಕನ್ನಡ ಆಧ್ಯಾಪಕ ಜಿ.ಶಿವಕುಮಾರ, ತಾಲೂಕು ಕಸಾಪ ಅಧ್ಯಕ್ಷ ರಮೇಶ್ ಗಡಾದ್, ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net