ಸಿರಿಗೇರಿ: ಗ್ರಾಮದ ಬಸವನಪೇಟೆ ಏರಿಯಾದಲ್ಲಿ ಜನವಸತಿಗೆ ಸಂಬಂಧಿಸಿದಂತೆ ಎಸಿ ಕೋರ್ಟ್‌ನಲ್ಲಿ ಪ್ರಕರಣವಿರುವ ಹಿನ್ನೆಲೆ ತಹಸೀಲ್ದಾರ್ ಗೌಸಿಯಾ ಬೇಗಂ ಶುಕ್ರವಾರ ಇಲ್ಲಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ನಂತರ ಮಾತನಾಡಿದ ಅವರು, ಬಸವನಪೇಟೆಯಲ್ಲಿ 30 ವರ್ಷಗಳಿಂದ ಜನವಸತಿಯಿದ್ದು, ಈ ಜಾಗಕ್ಕೆ ಸ್ಥಳೀಯ ಹಳ್ಳಿಮರದ ವೀರೇಶ ಪಟ್ಟಾದಾರರಾಗಿದ್ದಾರೆ. ಅವರು ಸಾರ್ವಜನಿಕರ ಪರವಾಗಿದ್ದು, ಸರ್ಕಾರದ ಯೋಜನೆಯಲ್ಲಿ 5 ಎಕರೆ 80 ಸೆಂಟ್ಸ್ ಜಾಗವನ್ನು ಉಪಗ್ರಾಮ ಎಂದು ಘೋಷಿಸಿ ಇಲ್ಲಿ ವಾಸವಿರುವ ಕುಟುಂಬಗಳಿಗೆ ಕಾಯಂ ಹಕ್ಕುಪತ್ರ ವಿತರಣೆ ಮಾಡಲು ಕ್ರಮವಹಿಸಲಾಗುವುದು ಪಟ್ಟಾದಾರರಿಗೆ ಸರ್ಕಾರ ಪರವಾಗಿ ಅಭಿನಂದನೆಗಳು ತಿಳಿಸುತ್ತೇವೆ.
ವಾರದೊಳಗೆ ಕೋರ್ಟ್, ಮತ್ತಿತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಸುಮಾರು ವರ್ಷಗಳ ಸಮಸ್ಯೆಯನ್ನು ಬಗೆ ಹರಿಯುವಂತೆ ಮಾಡಿದ್ದಕ್ಕೆ ಮಹಿಳಾ ನಿವಾಸಿಗಳು ತಹಸೀಲ್ದಾರ್‌ರಿಗೆ ಮತ್ತು ಪಟ್ಟಾದಾರರನ್ನು ಸ್ಮರಿಸಿದರು. ಪಿಎಸ್‌ಐ ವೈ.ಶಶಿಧರ ನಾಯಕ್, ಆರ್‌ಐ ಗಣೇಶ, ತಾಲೂಕು ಭೂಮಾಪಕ ನಿರಂಜನ, ವಿಎಒಗಳಾದ ಶಿವಪುತ್ರಪ್ಪ, ಹೊನ್ನಪ್ಪ ಇತರರಿದ್ದರು.