ಬಳ್ಳಾರಿ : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುಜಿಸಿ ಅರ್ಹತೆ ಸಲುವಾಗಿ ಕೆಲ ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪದವಿ ಪಡೆದು ಸೇವೆ ಸಲ್ಲಿಸುತ್ತಿದ್ದವರ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ರಾಜ್ಯದ ನಾನಾ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ ಪದವಿ ಪಡೆದಿರುವ ಪ್ರಕರಣಗಳು ದಿನೇದಿನೆ ಕಂಡು ಬರುತ್ತಿವೆ. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಹಾಗೂ ಶಿಕ್ಷಣದ ಗುಣಮಟ್ಟ ಕುಸಿಯಲಿದೆ. ಈಗಾಗಲೇ, ರಾಜ್ಯದ ಜಮಖಂಡಿ, ಹಾವೇರಿ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬಯಲಿಗೆ ಬಂದಿವೆ. ಆದರೆ, ಅಂತಹವರ ವಿರುದ್ಧ ಈವರೆಗೂ ಕಠಿಣ ಕಾನೂನು ಕ್ರಮ ಜರುಗಿಸದೆ ಇರುವುದು ಸಂಘಟನೆಯೂ ಖಂಡಿಸಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಈ ರೀತಿಯ ನಕಲಿ ಪಿಎಚ್‌ಡಿ ಪದವಿಗಳನ್ನು ತಯಾರಿಸುವ ಜಾಲ ಪತ್ತೆಹಚ್ಚಬೇಕು. ನಕಲಿ ಪಿಎಚ್‌ಡಿ ಪದವಿ ಹೊಂದಿದವರ ದಾಖಲೆಗಳ ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕಾನೂನು ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತು.
ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಿಗೆ ಸೂಕ್ತ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿ ಖಾಲಿಯಿರುವ ಶಿಕ್ಷಕರ ಮತ್ತು ಪ್ರಾಧ್ಯಾಪಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿತು. ನಗರದ ಗಡಗಿ ಚನ್ನಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.