ಹೂವಿನಹಡಗಲಿ: ಸಾಮಾಜಿಕ ಜಾಲತಾಣಗಳ ಬಳಕೆ ಭರಾಟೆಯಲ್ಲಿ ಯುವ ಸಮೂಹಕ್ಕೆ ಪುಸ್ತಕಗಳನ್ನು ಓದಲು ಕಲಿಸಬೇಕಿದೆ ಎಂದು ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ.ಚನ್ನಬಸವಣ್ಣ ಹೇಳಿದರು.
ವಿಶ್ವ ಕಿಡ್ನಿ ದಿನದ ಅಂಗವಾಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾಹಿತಿ ಎಚ್.ಶೇಷಗಿರಿರಾವ್ ಅವರ ‘ಏನಿದು ಬದುಕು ಇದೆಂಥಾ ತಿರುವು’ ಕಿಡ್ನಿ ಕಸಿ ಕಥಾನಕ ಪರಿಷ್ಕೃತ ಆವೃತ್ತಿ ಪುಸ್ತಕ ಬಿಡುಗಡೆಗೊಳಿಸಿ ಶನಿವಾರ ಮಾತನಾಡಿದರು.
ಪುಸ್ತಕದ ಓದು ಕೊಡುವ ಅನುಭವ ಅನನ್ಯ. ವಾಟ್ಸಾೃಪ್, ಫೇಸ್‌ಬುಕ್ ಹಾಗೂ ಇನ್ನಿತರ ಜಾಲತಾಣಗಳ ಭರಾಟೆ ನಡುವೆ ಓದುವ ಸಂಸ್ಕೃತಿ ಬೆಳೆಸುವ ಅನಿವಾರ್ಯವಿದೆ. ದಿ.ಶೇಷಗಿರಿ ರಾವ್ ಮಲ್ಲಿಗೆ ನಾಡಿನ ಬಂಡಾಯದ ಧ್ವನಿಯಾಗಿದ್ದರು. ಈ ಭಾಗದಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಜನಪರ ಹೋರಾಟಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಸಂಶೋಧಕ ಡಾ.ಸಂದೀಪ್ ಕೃತಿ ಪರಿಚಯಿಸಿದರು. ಹಿರಿಯ ರೈತ ಹೋರಾಟಗಾರ ಜಿ.ಎಂ.ವೀರಸಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹುರಕಡ್ಲಿ ಶಿವಕುಮಾರ, ಸಾಹಿತಿ ಬಿ.ಪೀರ್ ಬಾಷಾ, ಪ್ರಮುಖರಾದ ಗಣೇಶ್ ಹವಾಲ್ದಾರ್, ಕಲಾವತಿ ಹವಾಲ್ದಾರ್, ರಂಗನಾಥ ಹವಾಲ್ದಾರ್, ಎಲ್.ಖಾದರ್ ಬಾಷಾ, ಸಮತಾ, ಮಮತಾ ಹವಾಲ್ದಾರ್ ಇತರರಿದ್ದರು.