ಕಂಪ್ಲಿ: ಮಕ್ಕಳನ್ನು ವಿಶ್ವಮಾನವರನ್ನಾಗಿ ಬೆಳೆಸುವಲ್ಲಿ ಪಾಲಕರು ಮುಂದಾಗಬೇಕೆಂದು ಎಂದು ಮುಖ್ಯಶಿಕ್ಷಕ ರಾಜು ಬಿಲಂಕರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಕ್ಕಳು ಸುತ್ತಲಿನ ಪರಿಸರದ ಪ್ರಭಾವಕ್ಕೊಳಗಾಗಿ ಜಾತಿ, ಮತದ ಕಟ್ಟುಪಾಡುಗಳಿಗೆ ಒಳಗಾಗಿ ಅಲ್ಪಮಾನವನಾಗುತ್ತಾರೆ. ವಿಶ್ವಮಾನವ ಸಂದೇಶ ಕುವೆಂಪು ಅವರ ಜಾತ್ಯತೀತ ಮನೋಭಾವದ ಪ್ರತೀಕವಾಗಿದೆ. ಜಗತ್ತು ಶಾಂತಿ, ವೈಚಾರಿಕತೆ ಮತ್ತು ಮಾನವೀಯ ನೆಲೆಯಲ್ಲಿ ಬೆಳಗಲು ವಿಶ್ವಮಾನವ ಸಂದೇಶ ತತ್ವ ಪರಿಪಾಲನೆಯ ಅಗತ್ಯವಿದೆ ಎಂದರು.
ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಮಾತನಾಡಿ, ಮಕ್ಕಳಲ್ಲಿ ವಿದ್ಯೆ, ಸಂಸ್ಕಾರ, ವೈಚಾರಿಕ ಪ್ರಜ್ಞೆ ಮೂಡಿಸುವ ಮೂಲಕ ವಿಶ್ವಮಾನವವನ್ನಾಗಿಸಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ. ಕುವೆಂಪು ವಿಚಾರ ತತ್ವಗಳನ್ನು ನಿತ್ಯ ಬಾಳಿನಲ್ಲಿ ಅಳವಡಿಸಿಕೊಂಡರೆ ಜಾತ್ಯತೀತವಾಗಿ ಜೀವಿಸಲು ಸಾಧ್ಯ ಎಂದರು.