ಎಸ್ಪಿ ಹೆಸರಿಗೆ ಮಸಿ ಬಳಿಯುವ ಹುನ್ನಾರ !

ಎಸ್ಪಿ ಹೆಸರಿಗೆ ಮಸಿ ಬಳಿಯುವ ಹುನ್ನಾರ
ಎಸ್ಪಿ ಹೆಸರಿಗೆ ಮಸಿ ಬಳಿಯುವ ಹುನ್ನಾರ
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ
  • ಚಟುವಟಿಕೆ

* ಪ್ರಭಾವಿ ವ್ಯಕ್ತಿಗಳ ಕೈವಾಡದ ಶಂಕೆ

* ದೂರುದಾರ ವಿರುದ್ಧ 40 ಪ್ರಕರಣ ದಾಖಲು

ಬಳ್ಳಾರಿ : ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ದಂಧೆಕೋರರ ನಿದ್ದೆಗೆಡಿಸಿರುವ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಅವರ ಹೆಸರಿಗೆ ಮಸಿ ಬಳಿಯಲು ಕೆಲವು ‘ಪ್ರಭಾವಿ’ ವ್ಯಕ್ತಿಗಳು ತೆರೆಮರೆಯಲ್ಲೇ ಕಸರತ್ತು ನಡೆಸಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಕಳೆದ ಕೆಲ ದಿನದ ಹಿಂದೆ ಪಡಿತರ ಅಕ್ಕಿ ಅಕ್ರಮ ಸಾಗಣೆದಾರರೊಬ್ಬರ ಬಳಿ ಮೂರು ಲಕ್ಷ ರೂ. ಹಣ ಸುಲಿಗೆ ಮಾಡಿದ ಆರೋಪದಡಿ ಎಸ್ಪಿ ಅಂಗರಕ್ಷಕನ ಬಂಧನ ಪ್ರಕರಣದ ಬೆಳವಣಿಗೆ ಗಂಭೀರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಗರದ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಗಲಾಟೆಯ ನಂತರ ಅಧಿಕಾರ ವಹಿಸಿಕೊಂಡ ಎಸ್ಪಿ ಅವರು, ಕೇವಲ ನಾಲ್ಕು ತಿಂಗಳಲ್ಲಿ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬೇರೂರಿದ್ದ ಮಟ್ಕಾ, ಜೂಜಾಟ, ಗಾಂಜಾ ಮಾರಾಟ ಹಾಗೂ ಪಡಿತರ ಅಕ್ಕಿ ಅಕ್ರಮ ಸಾಗಣೆಗೆ ಬಲವಾದ ಪೆಟ್ಟು ನೀಡಿದ್ದಾರೆ. ಈ ಪ್ರಕರಣಗಳಲ್ಲಿ ನೂರಾರು ಅಕ್ರಮ ದಂಧೆಕೋರರನ್ನು ಜೈಲಿಗಟ್ಟಿದ್ದಲ್ಲದೆ, ಗಾಂಜಾ ಲೋಕದ ಕಿಂಗ್‌ಪಿನ್ ದೌಲ್‌ನನ್ನು ಜೈಲಿಗೆ ಕಳುಹಿಸಲು ಯಶಸ್ವಿಯಾಗಿದ್ದಾರೆ.
ಎಸ್ಪಿ ಕಾರ್ಯವೈಖರಿಯನ್ನು ಮೆಚ್ಚಿ ರಾಜ್ಯ ಸರ್ಕಾರ ಈಚೆಗೆ ‘ಮುಖ್ಯಮಂತ್ರಿ ಪದಕ’ ನೀಡಿ ಗೌರವಿಸಿದೆ.
ವ್ಯವಸ್ಥಿತ ಪಿತೂರಿಯೇ? : ಕಳೆದ ವಾರ ಎಸ್ಪಿಯವರ ಗನ್‌ಮ್ಯಾನ್ ದೇವರಾಜ್ ಎಂಬಾತ ಪಡಿತರ ಅಕ್ಕಿ ಸಾಗಣೆದಾರ ಶರಭಯ್ಯನಿಂದ ಮೂರು ಲಕ್ಷ ರೂ. ಸುಲಿಗೆ ಪಡೆದಿದ್ದಾನೆ ಎಂಬುದಾಗಿ ಮೂವರ ವಿರುದ್ಧ ದೂರು ದಾಖಲಿಸಿದ್ದ. ಈ ಪ್ರಕರಣದಡಿ ಗನ್‌ಮ್ಯಾನ್ ಸೇರಿ ಇಬ್ಬರನ್ನು ಬಂಧಿಸಿ, ಒಬ್ಬ ನಾಪತ್ತೆಯಲ್ಲಿದ್ದಾನೆ.
ಪಡಿತರ ಅಕ್ಕಿ ಅಕ್ರಮ ಸಾಗಣೆಗೆ ಸಂಬಂಧ ಈಗಾಗಲೇ ಶರಭಯ್ಯ ವಿರುದ್ಧ ಜಿಲ್ಲೆಯ ನಾನಾ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ. ಪೊಲೀಸರಿಗೆ ಹಣ ನೀಡಿರುವ ಬಗ್ಗೆ ಪ್ರಕರಣ ದಾಖಲಿಸಿದರೂ ತಾನು ಅಕ್ರಮ ಮಾಡುತ್ತಿರುವುದು ಬಯಲಿಗೆ ಬರುತ್ತದೆ ಎಂಬುದಾಗಿ ಗೊತ್ತಿದ್ದರೂ ಶರಭಯ್ಯ ದೂರು ನೀಡಿರುವುದು ‘ಪ್ರಭಾವಿ’ ಶಕ್ತಿಗಳ ಬೆಂಬಲ ಎತ್ತಿ ತೋರಿಸುತ್ತಿದೆ.
ಇದರ ಜತೆಗೆ ಲಕ್ಷಾಂತರ ರೂ. ಮೌಲ್ಯದ ಪಡಿತರ ಅಕ್ಕಿ, ಎರಡು ವಾಹನಗಳು ಜಪ್ತಿ ಪಡಿಸಿಕೊಳ್ಳುವುದರ ಜತೆ ಮತ್ತೋಂದು ಪ್ರಕರಣ ದಾಖಲಾಗಿ ಜೈಲು ಸೇರಬಹುದು ಎಂಬುದಾಗಿ ಅರಿತರೂ ಕೂಡ ಕೇವಲ ಮೂರು ಲಕ್ಷ ರೂ. ಗೆ ದೂರು ದಾಖಲಿಸಿದ್ದಾನೆ ಎಂದರೆ ಪ್ರಕರಣದ ಗಂಭೀರತೆ ಅರಿಯಬೇಕಿದೆ.
ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿ ಹತ್ತಿಕ್ಕಲು ದಂಧೆಕೋರರು ಮತ್ತು ರಾಜಕೀಯ ಹಿತಾಸಕ್ತಿಗಳು ಒಂದಾಗಿವೆ. ಎಸ್ಪಿಯವರ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ನಡೆದಿದೆ ಎಂಬುದಾಗಿ ಬಿಂಬಿಸಿ, ಅವರ ಘನತೆಗೆ ಕುಂದು ತರುವುದು ಮತ್ತು ಆ ಮೂಲಕ ವರ್ಗಾವಣೆಗೆ ಒತ್ತಡ ಹೇರುವುದು ಇದರ ಮೂಲ ಉದ್ದೇಶವಾಗಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿದವು.

ಏನಿದು ಪ್ರಕರಣ : ನಗರದಿಂದ ಏ.28ರಂದು ಬೆಳಗಿನ ಜಾವ ಎರಡು ಸರಕು ಸಾಗಣೆ ವಾಹನಗಳಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಅಕ್ರಮವಾಗಿ ಮೋಕಾ ಅರಣ್ಯ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು. ಮೋಕಾ ಅರಣ್ಯ ಪ್ರದೇಶದ ಬಳಿ ಕಾರಿನಲ್ಲಿ ಬಂದ ಎಸ್ಪಿ ಅಂಗರಕ್ಷಕ ದೇವರಾಜ್, ವಕೀಲ ಗಾದಿಲಿಂಗಪ್ಪ ಹಾಗೂ ಸಾಯಿರಾಮ್ ಸೇರಿ ಅಕ್ಕಿಯ ವಾಹನಗಳನ್ನು ಅಡ್ಡಗಟ್ಟಿದ್ದಾರೆ. ವಿಷಯ ತಿಳಿದು ಶರಭಯ್ಯ ಸ್ಥಳಕ್ಕೆ ಧಾವಿಸಿದಾಗ ಕಾರಿನಿಂದ ಇಳಿದ ಇಬ್ಬರು ಆರೋಪಿಗಳು ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ನೀವು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದೀರಿ ಎಂಬುದಾಗಿ ಮೂರು ಲಕ್ಷ ರೂ. ಪಡೆದಿದ್ದರು. ಈ ಆರೋಪದಡಿ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ, ಎಸ್ಪಿ ಸ್ಕ್ವಾಡ್ ಎಂಬುದಾಗಿ ಹೇಳಿಕೊಂಡು ಗನ್‌ಮ್ಯಾನ್ ಸುಲಿಗೆ ಮಾಡಿರುವ ಪ್ರಕರಣವನ್ನು ಎಸ್ಪಿ ಪನ್ನೇಕರ್ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕೋಟ್... ಈ ಪ್ರಕರಣದಲ್ಲಿ ಆರೋಪಿ ದೇವರಾಜ್ ನಗದು ಹಣ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಇನ್ನೊ ಕೆಲವೊಂದು ಸತ್ಯಾಸತ್ಯತೆ ತನಿಖೆ ನಂತರ ಬಹಿರಂಗಗೊಳ್ಳಲಿದೆ.
- ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net