ಗೈರು ಹಾಜರಿ ನಡುವೆ ಕಾಟಾಚಾರದ ಸಭೆ

ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು. ಮೇಯರ್ ಪಿ.ಗಾದೆಪ್ಪ, ಆಯುಕ್ತ ಪಿ.ಎಸ್.ಮಂಜುನಾಥ, ಪಾಲಿಕೆ ಸದಸ್ಯರಾದ ಕುಬೇರ, ಕೆ.ಹನುಮಂತಪ್ಪ, ಕವಿತಾ ಕೆ.ಹೊನ್ನಪ್ಪ ಇದ್ದರು.
ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು. ಮೇಯರ್ ಪಿ.ಗಾದೆಪ್ಪ, ಆಯುಕ್ತ ಪಿ.ಎಸ್.ಮಂಜುನಾಥ, ಪಾಲಿಕೆ ಸದಸ್ಯರಾದ ಕುಬೇರ, ಕೆ.ಹನುಮಂತಪ್ಪ, ಕವಿತಾ ಕೆ.ಹೊನ್ನಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಟಾಚಾರ
ಬಳ್ಳಾರಿ : ಇಲ್ಲಿನ ಜಿಪಂ ಸಭಾಂಗಣ ಗುರುವಾರ ಆಯೋಜಿಸಿದ್ದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಆರಂಭಕ್ಕೂ ಮೊದಲೇ ಹಲವು ವಿಘ್ನಗಳಿಗೆ ಸಾಕ್ಷಿಯಾಯಿತು. ಜನಪ್ರತಿನಿಧಿಗಳ ಗೈರು ಹಾಜರಿ ಹಾಗೂ ಕೋರಂ ಕೊರತೆಯಿಂದಾಗಿ ಸಭೆಯು ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಆರಂಭವಾಗಿ, ಅಂತಿಮವಾಗಿ ‘ಕಾಟಾಚಾರದ’ ಸಭೆಯಾಗಿ ಮುಕ್ತಾಯವಾಯಿತು.
ಬೆಳಗ್ಗೆ ಹನ್ನೊಂದು ಗಂಟೆಗೆ ನಿಗದಿಯಾಗಿದ್ದ ಸಭೆಯು, ನಿಯಮದಂತೆ ನಡೆಯಬೇಕಾದ ಹಿನ್ನೆಲೆ ಕೋರಂ (ಒಟ್ಟು ಸದಸ್ಯರ ಪೈಕಿ ಮೂರನೇ ಒಂದು ಭಾಗ) ಕೊರತೆಯಿಂದಾಗಿ ಮಧ್ಯಾಹ್ನ 12.30ರವರೆಗೆ ಆರಂಭಗೊಂಡಿತು. ಪಾಲಿಕೆಯ ಒಟ್ಟು 39 ಸದಸ್ಯರ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಎಂಟು ಸದಸ್ಯರು ಸೇರಿ ಕೇವಲ 16 ಮಂದಿ ಮಾತ್ರ ಹಾಜರಿದ್ದರು. ಆಡಳಿತ ವ್ಯವಸ್ಥೆಯ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿತ್ತು. ಸಭೆ ಆರಂಭಕ್ಕೂ ಮುನ್ನ ಪಾಲಿಕೆ ಸಭೆಗೆ ಹಾಜರುವಾಗುವಂತೆ ಸ್ವತಃ ಮೇಯರ್ ಪಿ.ಗಾದೆಪ್ಪ ಅವರು ಆಡಳಿತ ಪಕ್ಷದ ಸದಸ್ಯರಿಗೆ ದೂರವಾಣಿ ಕರೆ ಮಾಡುವ ದೃಶ್ಯ ಕಂಡುಬಂತು.
ಜನಪ್ರತಿನಿಧಿಗಳ ಗೈರು : ಸಭೆಯಲ್ಲಿ ಸ್ಥಳೀಯ ಶಾಸಕರಾದ ಬಿ. ನಾಗೇಂದ್ರ, ನಾರಾ ಭರತರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಉಪ ಮೇಯರ್ ಬಿ. ಮುಬೀನ್ ಹಾಗೂ ಆಡಳಿತ ಪಕ್ಷದ ಹಲವು ಸದಸ್ಯರು ಗೈರು ಹಾಜರಾಗಿದ್ದು ಸಭೆಯ ಗಂಭೀರತೆ ಪ್ರಶ್ನಿಸುವಂತಾಯಿತು. ವಿಶೇಷವೆಂದರೆ, ಸಭೆಯಲ್ಲಿ ಚುನಾಯಿತ ಸದಸ್ಯರಿಗಿಂತ ನಾಮನಿರ್ದೇಶಿತ ಸದಸ್ಯರೇ ನಗರದ ಸಮಸ್ಯೆಗಳ ಬಗ್ಗೆ ಮೇಯರ್ ಹಾಗೂ ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದರು. ಅಲ್ಲದೆ, ಸಭೆಯಲ್ಲಿನ ಮೈಕ್‌ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿವ ನೀರಿಗೆ ಆದ್ಯತೆ: ಬೇಸಿಗೆ ಆರಂಭವಾಗಿರುವ ಹಿನ್ನೆಲೆ ನಗರದಾದ್ಯಂತ ಎಂಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಕ್ಕೂರಲಾಗಿ ಒತ್ತಾಯಿಸಿದರು. ಜತೆಗೆ, ನೀರು ಪೂರೈಕೆ ಸುಗಮಗೊಳಿಸಲು ಹೆಚ್ಚುವರಿಯಾಗಿ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕು ಮತ್ತು ನೀರು ಬಿಡುವ ಮುನ್ನ ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪಾಲಿಕೆಯಿಂದ ಕುಡಿವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮೇಯರ್ ಪಿ. ಗಾದೆಪ್ಪ ಸಭೆಗೆ ಭರವಸೆ ನೀಡಿದರು.
ಅಧಿಕಾರಿಗಳ ಅಸಡ್ಡೆಗೆ ಆಕ್ರೋಶ: ತಾಳೂರು ರಸ್ತೆಯಲ್ಲಿ 20 ಅಡಿಯ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯು ಆಯುಕ್ತರ ಸಹಿಗಾಗಿ ಕಳೆದ ಒಂದು ವಾರದಿಂದ ವಿಳಂಬದ ಬಗ್ಗೆ ಬಿಜೆಪಿ ಸದಸ್ಯ ಗುಡಿಗುಂಟೆ ಹನುಮಂತ ಸಭೆಯ ಗಮನಕ್ಕೆ ತಂದರು. ಸಂಬಂಧಪಟ್ಟ ಅಧಿಕಾರಿಗಳಿಂದ ಕಡತ ಪಡೆದು ಸಹಿ ಮಾಡಲಾಗುವುದು ಎಂದು ಆಯುಕ್ತ ಪಿ.ಎಸ್.ಮಂಜುನಾಥ ಉತ್ತರಿಸಿದರು.
ಅಭಿವೃದ್ಧಿ ಕಾಮಗಾರಿಗಳ ವಿಳಂಬ: ನಿವೇಶನ ರಹಿತರಿಗೆ ನಿವೇಶನ ವಿತರಣೆಯಲ್ಲಿನ ವಿಳಂಬ, 33ನೇ ವಾರ್ಡ್‌ನಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಸಂಭವಿಸುತ್ತಿರುವ ಅಪಘಾತಗಳು ಹಾಗೂ ಬಿ-ಖಾತಾ ಹಗರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದವು.
ಉಗ್ರ ಹೋರಾಟದ ಎಚ್ಚರಿಕೆ: ನಗರ ನಾನಾ ವಾರ್ಡ್‌ಗಳಲ್ಲಿ ಕೆಲ ತಿಂಗಳ ಹಿಂದಯೇ ಭೂಮಿ ಪೂಜೆ ನೆರವೇರಿಸಿದರೂ ಕಾಮಗಾರಿ ಆರಂಭಿಸಿಲ್ಲ. ಈಗಾಗಲೇ ಭೂಮಿ ಪೂಜೆ ಕೈಗೊಂಡಿರುವ ಯೋಜನೆಗಳ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಆರಂಭಿಸದಿದ್ದರೆ ಪಾಲಿಕೆ ಮುಂಭಾಗ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಶ್ರೀನಿವಾಸ ಮೋತ್ಕರ್ ಎಚ್ಚರಿಕೆ ನೀಡಿದರು. ಒಟ್ಟಾರೆಯಾಗಿ, ನಗರದ ಮೂಲಭೂತ ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ಈ ಸಭೆಯು ನಿರಾಸೆ ಮೂಡಿಸಿದ್ದು, ಜನಪ್ರತಿನಿಧಿಗಳ ಅನುಪಸ್ಥಿತಿಯು ಪಾಲಿಕೆಯ ಕಾರ್ಯವೈಖರಿಯ ಬಗ್ಗೆ ಹಲವು ಅನುಮಾನಗಳು ಮೂಡಿಸಿತು. ಪಾಲಿಕೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು ಮತ್ತು ಪಾಲಿಕೆಯ ಅಧಿಕಾರಿಗಳನ್ನೊಳಗೊಂಡು ಒಟ್ಟು ಐವತ್ತು ಜನರು ಇಂದೋರ್ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳುವ ಕುರಿತು ಅನುಮೋದನೆ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net