ಬಳ್ಳಾರಿ : ಕಳೆದ ಒಂದೂವರೆ ತಿಂಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧಿಸಿದಂತೆ ಜಿಲ್ಲೆಯ ನಾನಾ ಠಾಣೆಗಳಲ್ಲಿ 18 ಪ್ರಕರಣ ದಾಖಲಾಗಿದ್ದು, 41 ಆರೋಪಿಗಳನ್ನು ಬಂಧಿಸಿ, 59 ಸಾವಿರ ರೂ. ನಗದು ಹಾಗೂ 17 ಮೊಬೈಲ್‌ಗಳು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಟ್ಕಾ, ಜೂಜೂಟ, ಅಕ್ರಮ ಮರಳು ಸಾಗಣೆ ಸೇರಿ ಒಟ್ಟು 75 ಪ್ರಕರಣ ದಾಖಲಿಸಿದ್ದು, 336 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಾರೆ 25.43ಲಕ್ಷ ರೂ. ನಗದು ವಶಪಡಿಸಿಕೊಂಡು, 80 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿ ಪಡಿಸಿಕೊಳ್ಳಲಾಗಿದೆ.
ನಗರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಮೇ.7ರಂದು ವ್ಯಕ್ತಿಯ ಮೇಲೆ ಕೊಲೆಗೆ ಯತ್ನಿಸಿದ ಆರೋಪದಡಿ ಮೂವರ ವಿರುದ್ಧ ದೂರು ದಾಖಲಾಗಿದೆ. ಗಾಂಧಿನಗರ ಠಾಣೆಯಲ್ಲಿ ಅಪ್ರಾಪ್ತ ಬಾಲಕನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂಬುದಾಗಿ ಬಾಲಕನ ತಂದೆ ಎಸ್.ಆರ್. ರವಿ ದೂರು ದಾಖಲಿಸಿದ್ದಾರೆ.
ತಾಲೂಕಿನ ಕೊಳಗಲ್ ಗ್ರಾಮದ ನಿವಾಸಿಗಳಾದ ದುರ್ಗಣ್ಣ ಹಾಗೂ ಹುಲೆಪ್ಪ ಅವರ ಮೇಲೆ ಅದೇ ಗ್ರಾಮದ ಸಿಂಧವಾಳ್ ನರಸಿಂಹ ಹಾಗೂ ಇತರೆ 36 ಜನರು ಹಲ್ಲೆ ಮಾಡಿದ್ದಾರೆ ಎಂಬುದಾಗಿ ಎಸ್‌ಸಿ, ಎಸ್ಟಿ ಕಾಯ್ದೆಯಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರುಗೋಡು ತಾಲೂಕಿನ ವೀರಾಪುರ ಗ್ರಾಮದ ಶಮೀನಾ ಬಾನು ಅವರಿಗೆ ಗಂಡ ದಾದಾವಲಿ ಹಾಗೂ ಆತನ ಸಂಬಂಧಿಕರು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.