ಕಂಪ್ಲಿ: ಪೋಲಿಯೋ ವಿರುದ್ಧ ನಿರಂತರ ಗೆಲುವು ಸಾಧಿಸಲು ಮಕ್ಕಳಿಗೆ ಲಸಿಕೆ ಹಾಕಿಸಲು ಪಾಲಕರು ಮುಂದಾಗಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪೋಲಿಯೋ ಮುಕ್ತ ಭಾರತವನ್ನಾಗಿಸಲು ತಪ್ಪದೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಮಗುವಿನ ರಕ್ಷಣೆ ವಿಷಯದಲ್ಲಿ ಪಾಲಕರು ತಪ್ಪು ಮಾಡಬಾರದು ಎಂದರು.
ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಮಾತನಾಡಿ, ತಾಲೂಕಿನಲ್ಲಿ ಐದು ವರ್ಷದೊಳಗಿನ 15,572 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಗರದಲ್ಲಿ 5530 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10042 ಮಕ್ಕಳನ್ನು ಗುರುತಿಸಲಾಗಿದೆ. 11 ಹೈ ರಿಸ್ಕ್ ಪ್ರದೇಶ ಗುರುತಿಸಲಾಗಿದೆ. 83 ತಂಡಗಳು ಹಾಗೂ 17ಜನ ಮೇಲ್ವಿಚಾರಕರು ಅಭಿಯಾನದಲ್ಲಿ ಪಾಲ್ಗೊಂಡಿವೆ ಎಂದರು.
ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ, ಡಾ.ಭರತ್ ಪದ್ಮಶಾಲಿ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವರಾಜ, ಬಿಎಚ್‌ಇಒ ಕೆ.ಶೋಭಾ, ಶುಶ್ರೂಷಾಧಿಕಾರಿಗಳಾದ ನೇತ್ರಾ, ರೇವಣ್ಣ, ಮಂಜುಳಾ, ಆರ್‌ಕೆಎಸ್‌ಕೆ ಸಮಾಲೋಚಕ ಮಂಜುನಾಥ ಇತರರಿದ್ದರು.