ಮಹಾನಗರ ಪಾಲಿಕೆಯ ಮೇಯರ್‌ಯಾಗಿ 23ನೇ ವಾರ್ಡ್ ಸದಸ್ಯ ಪಿ.ಗಾದೆಪ್ಪ
ಬಳ್ಳಾರಿಯ ಮಹಾನಗರ ಪಾಲಿಕೆಯಲ್ಲಿ ನೂತನ ಮೇಯರ್‌ಯಾಗಿ ಆಯ್ಕೆಯಾದ ಪಿ.ಗಾದೆಪ್ಪ ಸಂಭ್ರಮಿಸಿದರು. ಉಪ ಮೇಯರ್ ಬಿ.ಮುಬೀನ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ನಾರಾಭರತರೆಡ್ಡಿ, ಜಿಲ್ಲಾಧ್ಯಕ್ಷ ಅಲ್ಲಂಪ್ರಶಾಂತ್, ಕೆಪಿಸಿಸಿ ವೀಕ್ಷಕ ಆರ್.ವಿ.ವೆಂಕಟೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಜೆಪಿ ಪ್ರಯತ್ನ ಕೈಗೂಡಲಿಲ್ಲ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಸ್ಥಾನಕ್ಕೆ ನೇರ ಹಣಾಹಣಿ
ಮೇಯರ್ ಸ್ಥಾನ ನೀಡಬೇಕು ಮುಸ್ಲಿಂ ಸದಸ್ಯರ ಪಟ್ಟು
ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್‌ಯಾಗಿ 23ನೇ ವಾರ್ಡ್ ಸದಸ್ಯ ಪಿ.ಗಾದೆಪ್ಪ, ಉಪ ಮೇಯರ್ ಆಗಿ 28ನೇ ವಾರ್ಡ್‌ನ ಸದಸ್ಯೆ ಬಿ.ಮುಬೀನ್ ಆಯ್ಕೆಯಾದರು. ಕೆಲ ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಮೇಯರ್ ಆಯ್ಕೆ ವಿಚಾರ ಕೊನೆಗೂ ತೆರೆ ಬಿದ್ದಿತು.
ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್‌ನಲ್ಲಿ ಕಳೆದ ಕೆಲ ದಿನಗಳಿಂದ ನಡೆದ ಗುದ್ದಾಟ ಕೊನೆಗಳಿಗೆವರೆಗೂ ನಡೆಯಿತು. ಇದರ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿ ಮೇಯರ್ ಸ್ಥಾನಕ್ಕೆ ಕೋನಂಕಿ ತಿಲಕ್, ಉಪ ಮೇಯರ್ ಸ್ಥಾನಕ್ಕೆ ಕಲ್ಪನಾ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಪ್ರಯತ್ನ ಕೈಗೂಡಲಿಲ್ಲ.
ಕಾಂಗ್ರೆಸ್‌ನಲ್ಲಿಯೇ ಮೇಯರ್ ಸ್ಥಾನಕ್ಕೆ ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ್‌ಕುಮಾರ್, ಆಸೀಫ್, ಪಿ.ಗಾದೆಪ್ಪ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬಿ.ಮುಬೀನ್, ಕವಿತಾ ಹೊನ್ನಪ್ಪ ನಾಮಪತ್ರ ಸಲ್ಲಿಸಿದ್ದರು. ಕೊನೆಗಳಿಗೆಯಲ್ಲಿ ಪ್ರಭಂಜನ್, ಆಸೀಫ್‌ಗೆ ಮನವೊಲಿಸುವಲ್ಲಿ ಕೈ ನಾಯಕರು ಯಶ್ವಸಿಯಾದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಸ್ಥಾನಕ್ಕೆ ನೇರ ಹಣಾಹಣಿ ನಡೆಯಿತು.
* ಉಪ ಮೇಯರ್ ಆಗಿ ಬಿ.ಮುಬೀನ್
ಪಿ.ಗಾದೆಪ್ಪಗೆ 28 ಮತಗಳು ಬಿದ್ದರೆ, ಬಿಜೆಪಿಯ ಕೋನಂಕಿ ತಿಲಕ್ ಅವರಿಗೆ 13 ಮತಗಳು ಬಂದವು. ಉಪ ಮೇಯರ್ ಸ್ಥಾನಕ್ಕೂ ಚುನಾವಣೆ ನಡೆಯಿತು. ಕೆಪಿಸಿಸಿ ಕಾಂಗ್ರೆಸ್‌ನಿಂದ ವೀಕ್ಷಕರಾಗಿ ಆಗಮಿಸಿದ್ದ ಆರ್.ವಿ.ವೆಂಕಟೇಶ್, ಸೂರಜ್ ಹೆಗಡೆ ನಗರಕ್ಕೆ ಆಗಮಿಸಿದ್ದರು. ಇವರ ಜತೆಯಲ್ಲಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ನಾರಾಭರತರೆಡ್ಡಿ ಸೇರಿ ಪಾಲಿಕೆ ಸದಸ್ಯರ ಜತೆ ಸಮಾಲೋಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಿದರೂ ಪ್ರಯೋಜನ ಆಗಲಿಲ್ಲ. ಬೆಳಗ್ಗೆ ಪುನಃ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದರು. ಕೊನೆ ಕ್ಷಣದವರೆಗೆ ಹಗ್ಗ ಜಗ್ಗಾಟ ನಡೆಯಿತು. ಮರಳಿ ಪಾಲಿಕೆ ಕಚೇರಿಯಲ್ಲಿ ಕೆಪಿಸಿಸಿ ವೀಕ್ಷಕರು ಹಾಗೂ ಸದಸ್ಯರ ಸಭೆಯಲ್ಲಿ ಪಿ.ಗಾದೆಪ್ಪ ಅವರಿಗೆ ಬೆಂಬಲ ಸೂಚಿಸುವಂತೆ ಕೋರಿದ್ದ ಕೈ ನಾಯಕರ ಮಾತಿಗೆ ಮನ್ನಣೆ ನೀಡಿದೆ ಪ್ರಭಂಜನ ಕುಮಾರ್ ಸಭೆಯಿಂದ ಹೊರ ನಡೆದರು. ಈ ಬಾರಿ ಶತಗತಾಯವಾಗಿಮೇಯರ್ ಸ್ಥಾನಯಾಗಬೇಕು ಎಂಬ ಪಟ್ಟು ಹಿಡಿದಿದ್ದ 3ನೇ ವಾರ್ಡ್‌ನ ಎಂ.ಪ್ರಭಂಜನ್ ಮನವೊಲಿಸಲು ಕೆಪಿಸಿಸಿ ವೀಕ್ಷಕರು ಸುಸ್ತಾದರು.
ಪಾಲಿಕೆಯಲ್ಲಿ 39 ಸದಸ್ಯರಿದ್ದು, ಕಾಂಗ್ರೆಸ್ 21, ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನ ಹಕ್ಕಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ನಗರ ಶಾಸಕ ನಾರಾಭರತರೆಡ್ಡಿ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದರೂ ಯಾರ ಪರ ವಹಿಸದೆ ತಟಸ್ಥರಾಗಿ ಉಳಿದರು.
ಪ್ರಭಂಜನ್‌ಗೆ ಮೂರನೇ ಬಾರಿ ತಪ್ಪಿದ ಸ್ಥಾನ
ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಕಳೆದ ಎರಡು ಬಾರಿ ಮೇಯರ್ ಸ್ಥಾನಕ್ಕೆ ಯತ್ನಿಸಿ, ಹಿರಿಯ ನಾಯಕರ ಮಾತಿಗೆ ಮನ್ನಣೆ ನೀಡಿ ಹಿಂದೆ ಸರಿದಿದ್ದ ಪ್ರಭಂಜನ್ ಮೂರನೇ ಬಾರಿ ಕೂಡ ಕೈಗೂಡಲಿಲ್ಲ. ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಸದಸ್ಯರು ಪ್ರಭಂಜನ್ ಬೆಂಬಲಿಸುವುದಾಗಿ ತಿಳಿಸಿದ್ದರು. ಆದರೆ, ಹೈಕಮಾಂಡ್ ತಿರ್ಮಾನಕ್ಕೆ ಬದ್ಧರಾಗಿ ನಾಮಪತ್ರ ಹಿಂಪಡೆದಿದ್ದರಿಂದ ಅನಿವಾರ್ಯವಾಗಿ ಗಾದೆಪ್ಪ ಅವರಿಗೆ ಮತಹಾಕಲಾಯಿತು. ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕು ಮುಸ್ಲಿಂ ಸದಸ್ಯರ ಪಟ್ಟುಗೆ ನಾಸೀರ್ ಹುಸೇನ್ ಮನವೊಲಿಸಿದರು.
"
ಕೋಟ್... ಕಾಂಗ್ರೆಸ್ ಪಕ್ಷದ ನಾಯಕರ, ಶಾಸಕರಾದ ಬಿ.ನಾಗೇಂದ್ರ, ನಾರಾಭರತರೆಡ್ಡಿ ಒಮ್ಮತದಲ್ಲಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭಿಸುವುದು. ಪಾಲಿಕೆಯ ಎಲ್ಲ ಸದಸ್ಯರ ಸಲಹೆ ಪಡೆದು ಚರ್ಚಿಸಿ ಆಡಳಿತ ನಡೆಸುವೆ.