

ಬಳ್ಳಾರಿ: ವಿಮ್ಸ್ ಶವಾಗಾರದಲ್ಲಿ ಶವಗಳ ವೈಜ್ಞಾನಿಕ ಸಂರಕ್ಷಣೆ ಕಡೆಗಣನೆಗೆ ಗುರಿಯಾಗಿದೆ. ಶೀತಲೀಕರಣ ಹಾಳಾಗಿ ಒಂದು ವಾರವಾದರೂ ದುರಸ್ತಿಯಾಗಿಲ್ಲ. ತಾತ್ಕಾಲಿಕ ವ್ಯವಸ್ಥೆಯೂ ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ಶವಗಳನ್ನು ಶವಾಗಾರ ಕೋಣೆಯಲ್ಲಿ ಹಾಗೆಯೇ ಇಡಲಾಗುತ್ತಿದೆ. ಒಂದೇ ಯಂತ್ರದಲ್ಲಿ ಅಕ್ಕಪಕ್ಕ ಎರಡು ಶವಗಳನ್ನು ಇಡಲಾಗುತ್ತಿದೆ.
ವಿಮ್ಸ್‌ನಲ್ಲಿ ತಲಾ ನಾಲ್ಕು ಶವಗಳನ್ನು ಸಂರಕ್ಷಿಸುವ ಎರಡು ಶೀತಲೀಕರಣ ಘಟಕಗಳಿವೆ. ಈ ಪೈಕಿ ಒಂದು ಹಾಳಾಗಿ ತುಂಬಾ ದಿನಗಳಾಗಿದ್ದರೂ ದುರಸ್ತಿಗೆ ಕ್ರಮಕೈಗೊಂಡಿಲ್ಲ . ಮೇ 27ರಂದು ಎರಡನೇ ಶೀತಲೀಕರಣ ಘಟಕವೂ ಕೆಟ್ಟಿದೆ. ಇದರಿಂದಾಗಿ ಮೃತರ ಸಂಬಂಧಿಕರೇ ಬಾಡಿಗೆ ಆಧಾರದ ಮೇಲೆ ಖಾಸಗಿ ಶೀತಲೀಕರಣ ಯಂತ್ರ ತರಿಸಿ ಶವ ಸಂರಕ್ಷಿಸುವ ಅನಿವಾರ್ಯತೆ ಎದುರಾಗಿತ್ತು.
ಶೀತಲೀಕರಣ ಘಟಕಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ತಾತ್ಕಾಲಿಕವಾಗಿ ಜಿಂದಾಲ್ ಸಂಸ್ಥೆಯ ಶೀತಲೀಕರಣ ಘಟಕ ತರಿಸಿ ಶವಗಳ ಸಂರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ವಿಮ್ಸ್ ನಿರ್ದೇಶಕರು ತಿಳಿಸಿದ್ದರು. ಹೊಸ ಶೀತಲೀಕರಣ ಘಟಕಗಳ ಖರೀದಿ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಮುಗಿಸುವಂತೆ ಶಾಸಕ ಬಿ.ನಾಗೇಂದ್ರ ಕೂಡ ವಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದರು. ಆದರೂ, ಶೀತಲೀಕರಣ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಶೀತಲೀಕರಣ ಘಟಕದ ತುರ್ತು ದುರಸ್ತಿ ಅಗತ್ಯವಾಗಿದೆ. ಶಂಕಿತರ ಶವಗಳ ಗಂಟಲು ದ್ರವ ಪಡೆದು ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರಯೋಗಾಲಯ ವರದಿ ವಿಳಂಬವಾದರೆ ಶವಗಳ ಸಂರಕ್ಷಣೆಯ ಸವಾಲು ಎದುರಾಗಲಿದೆ. ಇದರಿಂದಾಗಿ ವಿಮ್ಸ್ ಇಲ್ಲವೇ ಜಿಲ್ಲಾಡಳಿತ ಈ ಬಗ್ಗೆ ತ್ವರಿತ ಕ್ರಮಕೈಗೊಳ್ಳಬೇಕಿದೆ.
ಜಿಂದಾಲ್ ಸಂಸ್ಥೆಯ ಶೀತಲೀಕರಣ ಯಂತ್ರ ಬಂದಿಲ್ಲ. ವಿಧಿ ವಿಜ್ಞಾನ ತಜ್ಞರು ಆಗಮಿಸಿದ್ದಾರೆ. ಬುಧವಾರ ಶೀತಲೀಕರಣ ಘಟಕದ ಸಮಸ್ಯೆ ಪರಿಹಾರ ಕಾಣಲಿದೆ. ಮೂರು ಬಾಡಿಗೆ ಯಂತ್ರಗಳನ್ನು ತರಿಸಿ ಶವಗಳನ್ನು ಸಂರಕ್ಷಿಸಲಾಗುತ್ತಿದೆ. ಸದ್ಯದ ಹವಾಮಾನಕ್ಕೆ ಅನುಗುಣವಾಗಿ ಸುಮಾರು ಏಳು ಗಂಟೆಗಳವರೆಗೆ ಶವ ಕೆಡುವುದಿಲ್ಲ. ವಿಲೇವಾರಿ ವಿಳಂಬವಾಗುವ ಶವಗಳನ್ನು ಶೀತಲೀಕರಣ ಯಂತ್ರದಲ್ಲಿ ಇರಿಸಲಾಗುತ್ತಿದೆ. ಉಳಿದ ಶವಗಳನ್ನು ತ್ವರಿತವಾಗಿ ಸಂಬಂಧಿಕರಿಗೆ ಒಪ್ಪಿಸಲಾಗುತ್ತಿದೆ.| ಡಾ.ದೇವಾನಂದ, ವಿಮ್ಸ್ ನಿರ್ದೇಶಕ