ಜಾತಿಜನಗಣತಿ ವರದಿ ಜಾರಿಗಾಗಿ ಧರಣಿ

Published on

ಬಳ್ಳಾರಿ ; ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಧ್ಯಯನ ಮಾಡಿ ಸಿದ್ದಪಡಿಸಿರುವ ಜಾತಿಜನಗಣತಿ ವರದಿ ಬಿಡುಗಡೆಗೆ ವಿಳಂಬ ನೀತಿ ಖಂಡಿಸಿ, ಕೂಡಲೇ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ಏಕಲವ್ಯ ಪಡೆ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಿದರು.

ಜಾತಿಜನಗಣತಿ ದತ್ತಾಂಶವನ್ನು ಬಿಡುಗಡೆ ಮಾಡಲು ಹಿಂಜರಿಯುತ್ತಿರುವುದು ಕಾನೂನು ಬದ್ದವಾಗಿ ಅಸಮರ್ಥನೀಯ ಮತ್ತು ಆಡಳಿತಾತ್ಮಕವಾಗಿ ಅವಿವೇಕದ ಸಂಗತಿಯಾಗಿದೆ. 2015ರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡು ಸಾಮಾಜಿಕ - ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಅದು ನಿಮ್ಮ ದಿಟ್ಟ ನಿಲುವೆಂದು ಭಾವಿಸುತ್ತೇವೆ. ಜಾತಿಜನಗಣತಿ ವರದಿಗೆ ಹತ್ತು ವರ್ಷಗಳಾಗಿವೆ. ರಾಜ್ಯದಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಬಲವಾಗಿರುವ ಎರಡು ಜನಾಂಗಗಳ ದತ್ತಾಂಶ ಬಿಡುಗಡೆಯನ್ನು ವಿರೋಧಿಸುತ್ತಿವೆ. ಇದು ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿ ಅಷ್ಟೇ ಇದನ್ನು ತಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಬಹು ಸಂಖ್ಯೆಯಲ್ಲಿರುವ ದಮನಿತ ಶೋಷಿತ ಸಮುದಾಯಗಳು ಜಾತಿಜನಗಣತಿ ದತ್ತಾಂಶವನ್ನು ಬಿಡುಗಡೆ ಮಾಡುತ್ತಿರಿ ಎಂಬ ಬಹುದೊಡ್ಡ ನಿರೀಕ್ಷೆಯಲ್ಲಿದೆ. ಈ ದೇಶದಲ್ಲಿ ತಾರತಮ್ಯ ಇನ್ನೂ ಚಾಲ್ತಿಯಲ್ಲಿದೆ. ಸಾಮಾಜಿಕ ಅಸಮಾನತೆ ಎಂಬುದು ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರದ ಬಳಿ ಜಾತಿ ಜನಾಂಗಗಳ ನಿಖರವಾದ ಮಾಹಿತಿ ಇಲ್ಲದೆ ರಾಜ್ಯಾಧಿಕಾರ ಮತ್ತು ಸಂಪತ್ತನ್ನು ಜನಸಂಖ್ಯೆಗ ಅನುಗುಣವಾಗಿ ಹಂಚಿಕೆ ಮಾಡಲು ಆಗುವುದಿಲ್ಲ ಎಂಬುದು ಸ್ಪಷ್ಟ ವಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬೊಗಸೆ ಖಾಲಿಯಾಗಿಯೇ ಇದೆ. ಜಾತಿ ಜನಗಣತಿ ದತ್ತಾಂಶವನ್ನು ಬಿಡುಗಡೆ ಮಾಡದಿದ್ದರೆ ದಲಿತ, ದಮನಿತ, ಶೋಷಿತ ಸಮುದಾಯಗಳಿಗೆ ಮಾಡಿದ ಅನ್ಯವಾಯವಾಗಿ ಇತಿಹಾಸದಲ್ಲಿ ಉಳಿಯಲಿದೆ. ಕೂಡಲೇ ಜಾತಿಜನಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net