ಬಳ್ಳಾರಿ ; ಇಲ್ಲಿನ ರಾಯಚೂರು,ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಮೊದಲ ದಿನ ಎಂಟು ನಾಮಪತ್ರ ಸಲ್ಲಿಕೆಯಾಗಿ ಚುನಾವಣೆ ಗರಿಗೆದರಿದೆ.
ರಾಯಚೂರು, ಕೊಪ್ಪಳ ತಲಾ ನಾಲ್ಕು ಹಾಗೂ ಬಳ್ಳಾರಿ ಮತ್ತು ವಿಜಯನಗರ ಎರಡು ಸೇರಿ ನಾಲ್ಕು ಸ್ಥಾನಗಳು ಹಂಚಿಕೆಯಾಗಿದ್ದು ಒಟ್ಟು 12 ನಿರ್ದೇಶಕರಿಗೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರತಿ ಜಿಲ್ಲೆ ಜಿಲ್ಲೆಯಲ್ಲೂ ಮೂರು ಕ್ಷೇತ್ರಗಳನ್ನು ಸಾಮಾನ್ಯ ಸದಸ್ಯರಿಗೆ ಮೀಸಲಿಡಲಾಗಿದ್ದರೆ, ತಲಾ ಒಂದೊಂದು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 805 ಹಾಲು ಉತ್ಪಾದಕ ಸಂಘಗಳಿದ್ದು ಅದರಲ್ಲಿ 466 ಸಂಘಗಳಿಗೆ ಮಾತ್ರವೇ ಮತದಾನದಲ್ಲಿ ಪಾಲ್ಗೂಳ್ಳುವ ಅರ್ಹತೆಯಿದೆ. ಬಳ್ಳಾರಿ 28, ಕೊಪ್ಪಳ 154, ರಾಯಚೂರು 55 ಹಾಗೂ ವಿಜಯನಗರ 229 ಮತಗಳಿವೆ. ಜೂ.30 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಜು.2ಕ್ಕೆ ಅಂತ್ಯಗೊಳ್ಳಲಿದೆ. ಜು.3ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅದೇ ದಿನ ಕ್ರಮಬದ್ಧ ನಾಮಪತ್ರಗಳನ್ನು ಘೋಷಣೆ ಮಾಡಲಾಗುತ್ತದೆ. ನಾಮಪತ್ರಗಳನ್ನು ಹಿಂಪಡೆಯಲು ಜು.4 ಕೊನೆಯ ದಿನವಾಗಲಿದೆ. ಅಂತಿಮ ಕಣದಲ್ಲಿ ಉಳಿದವರ ಪಟ್ಟಿಯನ್ನು ಅದೇ ದಿನ ಘೋಷಣೆ ಮಾಡಲಾಗುತ್ತದೆ. ಅದೇ ದಿನ ಚುನಾವಣೆ ಚಿಹ್ನೆ ಹಂಚಿಕೆ ಮಾಡಲಾಗುವುದು. ಜು.6ರಂದು ಅಭ್ಯರ್ಥಿಗಳು ಹಾಗೂ ಅವರ ಚಿಹ್ನೆಗಳನ್ನು ಘೋಷಣೆ ಮಾಡಲಿದ್ದಾರೆ. ಜು.10 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
ಅಧ್ಯಕ್ಷರ ಆಯ್ಕೆ : ಅಧ್ಯಕ್ಷರ ಆಯ್ಕೆಗೆ 12 ನಿರ್ದೇಶಕರು, ಸರ್ಕಾರದಿಂದ ನಾಮನಿರ್ದೇಶಿತ, ರಾಬಕೊವಿ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದಿಂದ(ಕೆಎಂಎಫ್), ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ), ಪಶುಸಂಗೋಪನಾ ಹಾಗೂ ಸಹಕಾರ ಇಲಾಖೆಯಿಂದ ತಲಾ ಒಬ್ಬರು ಸೇರಿ ಒಟ್ಟು 18 ಮತ ಚಲಾಯಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
ನಾಮಪತ್ರ ಸಲ್ಲಿಕೆ : ವಿಜಯನಗರ ಜಿಲ್ಲೆಯ ಬಿ.ಸಿದ್ದೇಶ್ , ಕೆ.ಪರಮರೆಡ್ಡಿ, ಪೂಜಾರಿ ಮಲ್ಲಿಕಾರ್ಜುನ ಹಾಗೂ ಕೊಪ್ಪಳದಿಂದ ಕೃಷ್ಣರೆಡ್ಡಿ ಗಲಭಿ, ಮಂಜುನಾಥ, ಹಂಪಯ್ಯ ಸ್ವಾಮಿ, ಎನ್. ಸತ್ಯನಾರಾಯಣ, ಎಂ.ಕೃಷ್ಣ ಕುಮಾರಿ (ಮಹಿಳೆ) ಸೇರಿ ಒಟ್ಟು ಎಂಟು ಜನ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯಿಂದ ಪ್ರತಿನಿಧಿ ಆಯ್ಕೆ ಅನುಮಾನ : ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯಾಗಿ ವಿಭಜನೆಗೊಂಡು ವರ್ಷಗಳೇ ಕಳೆಯುತ್ತಿದೆ. ಸದ್ಯ ನಡೆಯುವ ಈ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಿಗೆ ಸೇರಿ ನಾಲ್ಕು ಸ್ಥಾನಗಳನ್ನು ಮಾತ್ರವೇ ನಿಗದಿ ಮಾಡಲಾಗಿದೆ. ಎರಡೂ ಜಿಲ್ಲೆಯವರು ಎಲ್ಲ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶವಿದೆ. ಇನ್ನೊಂದಡೆ ಬಳ್ಳಾರಿ 28, ಕೊಪ್ಪಳ 154, ರಾಯಚೂರು 55 ಹಾಗೂ ವಿಜಯನಗರ 229 ಮತಗಳಿವೆ. ವಿಜಯನಗರ ಜಿಲ್ಲೆಯು ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಅತ್ಯಧಿಕ ಮತಗಳು ಹೊಂದಿದೆ. ಹೀಗಾಗಿ ಅತ್ಯಧಿಕ ಮತಗಳನ್ನು ಹೊಂದಿರುವ ವಿಜಯನಗರ ಜಿಲ್ಲೆಯ ಸ್ಪರ್ಧಿಗಳು ಸುಲಭವಾಗಿ ನಾಲ್ಕು ಸ್ಥಾನಗಳು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜಿಲ್ಲೆಯ ಮತಗಳು ಕೇವಲ ಬೆರಳಣಿಕೆಯಷ್ಟೆ ಇರುವುದರಿಂದ ಸ್ಪರ್ಧಾ ಕಣದಲ್ಲಿ ಪರಾಜಿತ ಹೊಂದುವುದು ಖಚಿತವಾಗಿದೆ. ಆದ್ದರಿಂದ, ಸದ್ಯದ ಪರಿಸ್ಥಿತಿ ಗಮನಿಸುತ್ತಿದ್ದರೆ ಜಿಲ್ಲೆಯಿಂದ ಒಬ್ಬ ಪ್ರತಿನಿಧಿಯೂ ಆಯ್ಕೆಯಾಗುವ ಅನುಮಾನವಿದೆ. ಒಕ್ಕೂಟದ ಕೇಂದ್ರ ಕಚೇರಿ ನಗರದಲ್ಲಿದ್ದರೂ ಜಿಲ್ಲೆಯಿಂದ ಪ್ರತಿನಿಧಿಯನ್ನು ಆಯ್ಕೆಯಾಗದಂತ ಸ್ಥಿತಿಗೆ ತಲುಪಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಅಸಮಾನತೆ ಸೃಷ್ಠಿಯಾಗುವ ಸಾಧ್ಯತೆಗಳಿವೆ. ಅದು ಆಡಳಿತ ಮಂಡಳಿಯ ನಿರ್ಧಾರಗಳ ಮೇಲೂ ಪ್ರಭಾವ ಬೀರಬಹುದು.
ಕೋಟ್.. ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರಿಗೆ ಸ್ಥಾನಗಳಿಗೆ ಈವರೆಗೆ ಕೊಪ್ಪಳ, ವಿಜಯನಗರದಿಂದ ಎಂಟು ಜನ ನಾಮಪತ್ರ ಸಲ್ಲಿಸಿದ್ದಾರೆ.
- ಪಿ.ಪ್ರಮೋದ್, ಚುನಾವಣಾಧಿಕಾರಿ, ರಾಬಕೊವಿ ಒಕ್ಕೂಟದ ನಿರ್ದೇಶಕರ ಚುನಾವಣೆ.