

ಬಳ್ಳಾರಿ: ಕರೊನಾ ವಿರುದ್ಧದ ಹೋರಾಟದಲ್ಲಿ ಅಗ್ನಿಶಾಮಕ ಸಿಬ್ಬಂದಿಯೂ ಕೈಜೋಡಿಸಿದೆ. ಜಿಲ್ಲೆಯ 10 ಅಗ್ನಿಶಾಮಕ ವಾಹನಗಳು ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಸಾಯನಿಕ ಸಿಂಪಡಣೆಯಲ್ಲಿ ನಿರತವಾಗಿವೆ. ಸೋಡಿಯಂ ಹೈಪೊಕ್ಲೋರೈಟ್ ದ್ರಾವಣವನ್ನು ಆ್ಯಂಟಿ ಡಿಸ್‌ಇನ್‌ಫೆಕ್ಟೆಂಟ್ ಆಗಿ ಬಳಕೆ ಮಾಡಲಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಈ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು ಸೂಚಿಸುವ ಸ್ಥಳಕ್ಕೆ ತೆರಳಿ ಸಿಂಪಡಣೆ ಮಾಡಲಾಗುತ್ತಿದೆ. ನಿತ್ಯ ಹೆಚ್ಚಿನ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಿಸುವ ಅಗ್ನಿಶಾಮಕ ಸಿಬ್ಬಂದಿಯ ಪ್ರಯತ್ನಕ್ಕೆ ಬೇಸಿಗೆಯಿಂದ ಹಿನ್ನಡೆಯಾಗಿದೆ. ತೀವ್ರ ಬಿಸಿಲಿನಿಂದಾಗಿ ಅಗ್ನಿ ಅವಘಡಗಳು ಹೆಚ್ಚು ಸಂಭವಿಸುತ್ತಿರುವುದೇ ಇದಕ್ಕೆ ಕಾರಣ. ಕಂಪ್ಲಿಯಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ್ದರಿಂದ ಹೊಸಪೇಟೆ ಹಾಗೂ ಕುರುಗೋಡು ಅಗ್ನಿಶಾಮಕ ಠಾಣೆಯ ವಾಹನ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ ತಿಳಿಸಿದರು.
ಕೌಲ್ ಬಜಾರ್‌ಗೆ ಶಾಸಕ ಭೇಟಿ
ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಹೈಪೊಕ್ಲೋರೈಟ್ ದ್ರಾವಣ ಸಿಂಪಡಿಸಿದರು. ಶಾಸಕ ಬಿ.ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮನೆಗಳಿಗೆ ಭೇಟಿ ನೀಡಿದ ಶಾಸಕ ನಾಗೇಂದ್ರ ಮನೆಗಳಿಂದ ಹೊರಗೆ ಬರಬಾರದು. ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.