ಬಲ್ಲಮಾವಟಿ ತಂಡ ಚಾಂಪಿಯನ್

6 gkp. 02
ಕಿಗ್ಗಟ್ ನಾಡ್ ಪ್ಲೇಯಿಂಗ್ ಎಲ್ಬೋಸ್ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಚಾಂಪಿಯನ್ ಆಗಿ ಹೊರಹೊಮ್ಮಿತು.
Published on

ಗೋಣಿಕೊಪ್ಪಲು: ಕಿಗ್ಗಟ್ ನಾಡ್ ಪ್ಲೇಯಿಂಗ್ ಎಲ್ಬೋಸ್ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಹಾತೂರು ತಂಡ ರನ್ನರ್‌ಅಪ್ ಆಯಿತು.

ನಾಲ್ಕು ದಿನಗಳ ಕಾಲ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಪಂದ್ಯಾವಳಿಯಲ್ಲಿ ಹಾತೂರು ಹಾಗೂ ಬಲ್ಲಮಾವಟಿ ತಂಡಗಳು ಫೈನಲ್ ಪ್ರವೇಶಿಸಿದವು. ಎರಡು ತಂಡಗಳು ಆರಂಭಿಕ ಹಂತದಿಂದಲೇ ಉತ್ತಮ ಪ್ರದರ್ಶನ ನೀಡಿದವು. ಮೊದಲಾರ್ಧದಲ್ಲಿ ಹಾತೂರು ಹಾಗೂ ಬಲ್ಲಮಾವಟಿ ತಂಡಗಳಿಗೆ ಲಭಿಸಿದ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವ ಮೂಲಕ 1-1 ಸಮಬಲದ ಹೋರಾಟದೊಂದಿಗೆ ಪಂದ್ಯಾವಳಿಗೆ ರೋಚಕತೆ ನೀಡಿದರು. ಅಂತಿಮವಾಗಿ ಶೂಟ್ ಔಟ್‌ನಲ್ಲಿ ಬಲ್ಲಮಾವಟಿ ತಂಡವು 4-2 ಗೋಲುಗಳ ಅಂತರದಿಂದ ಹಾತೂರು ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಕಿಗ್ಗಟ್ ನಾಡ್ ಪ್ಲೇಯಿಂಗ್ ಎಲ್ಬೋಸ್ ಚಾಂಪಿಯನ್ ಶಿಪ್ ಪಡೆದು ಬೀಗಿದರು.

ರನ್ನರ್‌ಅಪ್ ಪ್ರಶಸ್ತಿಯನ್ನು ಹಾತೂರು ತಂಡ ಪಡೆಯಿತು. ತಂಡದಲ್ಲಿ ನಾಲ್ಕು ಅತಿಥಿ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಸೆಮಿಫೈನಲ್ಸ್ ಪ್ರಶಸ್ತಿಯನ್ನು ಕಾಕೊಟುಪರಂಬು ಹಾಗೂ ಮಲ್ಮ ವೈಟ್ ತಂಡಗಳು ಸಮನಾಗಿ ಪಡೆದವು.

ಫೈನಲ್ ಪಂದ್ಯಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಸಂಸತ್ ಕೇಲ್ ಮಹೋತ್ಸವವನ್ನು ಆಯೋಜನೆ ಮಾಡಲಾಗುತ್ತದೆ. ಪ್ರತಿ ಸಂಸದರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಿದೆ ಎಂದು ಹೇಳಿದರು.

ಕೊಡಗಿನಲ್ಲಿ ಕ್ರೀಡೆಗೆ ವಿಪುಲ ಪ್ರೋತ್ಸಾಹ ಲಭಿಸುತ್ತಿದೆ, ದಾನಿಗಳ ಸಹಕಾರದಿಂದ ಕ್ರೀಡೆ ನಡೆಯುತ್ತಿರುವುದು ಶ್ಲಾಘನೀಯ ತಿಳಿಸಿದರು.

ಶಾಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹೋಬಳಿವಾರು ಮೈದಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದೆಯೂ ಸಹಕಾರ ನೀಡಲಾಗುತ್ತದೆ ಎಂದರು.

ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವ ಕುಮಾರ್, ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ವೈದ್ಯರಾದ ಡಾ ಎಂ.ಎಸ್.ಬೆಳ್ಳಿಯಪ್ಪ, ದಾನಿಗಳಾದ ಕೇಚೆಟ್ಟಿರ ವಿಜಯ್ ಉತ್ತಯ್ಯ ಇತರರು ಇದ್ದರು.

ಪಂದ್ಯಾವಳಿಯಲ್ಲಿ ಕಿಗ್ಗಟ್ ನಾಡ್ ಪ್ಲೇಯಿಂಗ್ ಎಲ್ಬೋಸ್ ತಂಡದ ಪದಾಧಿಕಾರಿಗಳಾದ ಪೃಥ್ವಿ ಕಾರ್ಯಪ್ಪ, ಪ್ರಣಮ್ ಬಿದ್ದಪ್ಪ, ಸಂಪತ್ ಪೂಣಚ್ಚ, ಕೂಕಂಡ ಬಿದ್ದಪ್ಪ, ಅಪ್ಪಚ್ಚು, ಕಾರ್ಯಪ್ಪ, ಧರ್ಮಜ, ದರ್ಶನ್, ಪೆಮ್ಮಂಡ ಬಿದ್ದಪ್ಪ, ಮುತ್ತಣ್ಣ, ಸಂಜಿತ್ ಸೋಮಯ್ಯ, ಸಂದೇಶ್ ಬೆಳ್ಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net