

ವಿಜಯಪುರ: ವೈಕುಂಠ ಏಕಾದಶಿ ಸಂಭ್ರಮದಲ್ಲಿ ಜನರು ದೇವರ ದರ್ಶನ ಪಡೆಯುತ್ತಿದ್ದು, ಯುವಜನರು ಧಾರ್ಮಿಕತೆ ಕಡೆ ಬರುವಂತೆ ಮಾಡಬೇಕಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರದಲ್ಲಿರುವ ಮನೆದೇವರಾದ ಸೌಮ್ಯಕೇಶವಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ವೈಕುಂಠ ಏಕಾದಶಿಯ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ನಂತರ ಬಲಿಜಪೇಟೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಎ ಕಾಯ್ದೆಯಿಂದ ದೇಶದ ಯಾವುದೇ ಸಮುದಾಯಗಳಿಗೂ ತೊಂದರೆಯಾಗುವುದಿಲ್ಲ. ರಾಜಕೀಯ ದುರುದ್ದೇಶದಿಂದ ಜನರನ್ನು ತಪ್ಪು ದಾರಿಗೆ ಎಳೆಯುವಂತಹ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಮನೆ ಮನೆಗೆ ತೆರಳಿ ಮುಸ್ಲಿಂ ಸಮುದಾಯಗಳಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮುಖಂಡ ಬಲಮುರಿ ಶ್ರೀನಿವಾಸ್ ಮಾತನಾಡಿ, ಇಲ್ಲಿ ನಿರ್ಮಾಣ ಮಾಡಿರುವ ಬಲಿಜ ಭವನದ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಅನುದಾನ ಕೊಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದೇವಾಲಯದಲ್ಲಿ ಸಂಗೀತ ಲಹರಿ ಕಾರ್ಯಕ್ರಮ ನಡೆಯಿತು. ದೇವಾಲಯವನ್ನು ವಿವಿಧ ಹೂವು ಮತ್ತು ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿತ್ತು.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್, ಎಂಜಿನಿಯರ್‌ಗಳಾದ ಗಂಗಾಧರ್, ಸುಪ್ರಿಯಾ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಕೆ.ಪಿ.ಸಿ.ಸಿ. ಸದಸ್ಯ ಸಿ.ಕೆ.ರಾಮಚಂದ್ರಪ್ಪ, ಬಲಿಜ ಸಂಘದ ಅಧ್ಯಕ್ಷ ಮಹಾತ್ಮಾಂಜನೇಯ ಹಾಗೂ ಬಿಜೆಪಿ ತಾಲೂಕು ಕಾರ್ಯದರ್ಶಿ ಎಸ್.ರವಿಕುಮಾರ್, ಸಾಗರ್, ಸಂಘದ ಪದಾಧಿಕಾರಿಗಳು ಇದ್ದರು.
ಪಕ್ಷೇತರ ಅಭ್ಯರ್ಥಿಗೆ ಮತ ಕೇಳಲು ಆಗುತ್ತಾ?: ಮಾಜಿ ಸಚಿವ ಎಂಟಿಬಿ ನಾಗರಾಜ್ ದಿನಬೆಳಗಾದರೆ ಮುಖ್ಯಮಂತ್ರಿ ಮನೆಗೆ ಹೋಗಿ ನನ್ನ ಸೋಲಿಗೆ ಬಿ.ಎನ್.ಬಚ್ಚೇಗೌಡರೇ ಕಾರಣ ಎಂದು ದೂರು ಸಲ್ಲಿಸುತ್ತಿದ್ದಾರೆ. ಎಲ್ಲಿಯಾದರೂ ನಾನು ಒಂದು ಕರಪತ್ರ ಹಂಚಿದ್ದಾಗಲಿ, ಮಗನ ಪರವಾಗಿ ಮತಯಾಚನೆ ಮಾಡಿರುವುದಾಗಲಿ ಮಾಡಿಲ್ಲ. ನಾನು ಬಿಜೆಪಿ ಸಂಸದ, ಪಕ್ಷೇತರ ಅಭ್ಯರ್ಥಿಗೆ ಮತ ಕೇಳಿಲಿಕ್ಕೆ ಆಗುತ್ತಾ, ಶರತ್‌ಬಚ್ಚೇಗೌಡ ಸ್ವಾಭಿಮಾನಿಯಾಗಿ ನಿಂತು ಗೆದ್ದಿದ್ದಾನೆ. ಪಕ್ಷದ ಅಧ್ಯಕ್ಷರಾಗಲಿ, ಮುಖಂಡರಾಗಲಿ ನನ್ನನ್ನು ಈ ವಿಚಾರದಲ್ಲಿ ಸಂಪರ್ಕ ಮಾಡಿಲ್ಲ. ಎಂಟಿಬಿ ನಾಗರಾಜ್ ಆರೋಪದಲ್ಲಿ ಹುರುಳಿಲ್ಲ ಎಂದು ಬಚ್ಚೇಗೌಡರು ಹೇಳಿದರು.
ಶಾಸಕರಿಗೆ ಸಚಿವ ಸ್ಥಾನ: ಬಿಜೆಪಿ ರಾಷ್ಟ್ರೀಯ ಪಕ್ಷ. ಶಾಸಕರನ್ನು ಸಚಿವರನ್ನಾಗಿ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿಯೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಯಾರನ್ನ ಸಚಿವರನ್ನಾಗಿ ಮಾಡಬೇಕು, ಯಾವಾಗ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ.