

ಉಡುಪಿ: ಗುರು ಹಾಗು ವಿದ್ಯಾರ್ಥಿಗಳ ನಡುವೆ ವಯಸ್ಸಿನ ಅಂತರವಿದ್ದರೂ, ಗೆಳಯ, ಮಾರ್ಗದರ್ಶಕ, ನಾಯಕನಾಗಿ ವಿದ್ಯಾರ್ಥಿಗಳಿಗೆ ಬದುಕಿನ ಹೆಜ್ಜೆಯನ್ನಿಡಲು ಕಲಿಸಿ ಕೊಡುವವನೇ ಪರಿಪೂರ್ಣ ಗುರು ಎಂದು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ. ಡಾ.ರಘುನಾಥ್ ಕೆ.ಎಸ್. ಅಭಿಪ್ರಾಯಪಟ್ಟರು.
ಬುಧವಾರ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅತ್ಯುನ್ನತ್ತ ವ್ಯಕ್ತಿಗಳಾಗುವುದನ್ನು ನೋಡುವುದೇ ಗುರುವಿಗೆ ಸಂತಸ ನೀಡುತ್ತದೆ. ವಿದ್ಯಾರ್ಥಿಗಳು ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗುರು ಕಾಣಿಕೆಯನ್ನು ನೀಡಬಹುದು ಎಂದು ನುಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ಪ್ರಾಧ್ಯಾಪಕಿ ಡಾ.ಪ್ರೀತಿ ಹರೀಶ್ರಾಜ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕರಿಗೆ ಸಂತೋಷ ನೀಡುತ್ತದೆ. ಗುರುಗಳಿಗೆ ವಿದ್ಯಾರ್ಥಿಗಳ ಮೇಲಿನ ಪ್ರೀತಿ, ಮಮಕಾರ ಎಂದಿಗೂ ಕಡಿಮೆಯಾಗುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ನಮಗೆ ಸಮಾನ. ಮಕ್ಕಳ ಸಾಧನೆಯೇ ವಿದ್ಯಾಸಂಸ್ಥೆಗೆ ಮುಕುಟಮಣಿ ಎಂದವರು ಹೇಳಿದರು.
ವಿದ್ಯಾರ್ಥಿ ಸಂದ ಅಧ್ಯಕ್ಷ ಶ್ರೀವತ್ಸ ಗಾಂವ್ಸ್ಕರ್, ಗಣೇಶ್ ವಿ.ಶಾನುಭೋಗರ, ರೋಸ್, ದಿಶಾ, ಸಂಜನಾ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಮೂರನೇ ವರ್ಷದ ಸಂಘದ ಅಧ್ಯಕ್ಷ ಶಮಂತ್, ಪ್ರೊ. ರೋಹಿತ್ ಎಸ್.ಆಮೀನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿನಯಾ ಸ್ವಾಗತಿಸಿ, ಅಚಲ ಅತಿಥಿಗಳನ್ನು ಪರಿಚಯಿಸಿದರು. ಆ್ಯನ್ಸಿಂಟ್ ವಂದಿಸಿದರು. ಶ್ರೀಲಕ್ಷಿ ಆರ್. ನಂಬಿಯಾರ್ ನಿರೂಪಿಸಿದರು.