

ಚಳ್ಳಕೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ ವಿವಿಧ ಗ್ರಾಮದ ರೈತರು, ಬಾಲೇನಹಳ್ಳಿ ಸಮೀಪದ ವಿದ್ಯುತ್ ಪ್ರಸರಣ ಘಟಕಕ್ಕೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು, ಜಿಲ್ಲೆಯಲ್ಲಿ ಬಹುತೇಕ ರೈತರು ಮಳೆ ನಂಬಿ ಕೃಷಿ ಮಾಡುತ್ತಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಆರಂಭದಿಂದಲೂ ಸರಿಯಾಗಿ ಮಳೆ ಬಾರದೆ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಜಮೀನಿಗೆ ಹಾಕಿರುವ ಬಂಡವಾಳ ಸಹ ಸಿಗದಂತಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಸಿಲುಕಿದ ರೈತರು ಜೀವನ ಹೇಗೆ ನಡೆಸಬೇಕಂಬ ಚಿಂತೆಯಾಗಿದೆ. ಇದರ ನಡುವೆ ಪದೇ ಪದೆ ವಿದ್ಯುತ್ ವ್ಯತ್ಯಯವಾದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸ್ವಲ್ಪ ನೀರಾವರಿ ಜಮೀನುಗಳಲ್ಲಿ ವಿದ್ಯುತ್ ನಂಬಿ ಕೃಷಿ ಕೈಗೊಳ್ಳಲಾಗಿದೆ. ಆದರೆ, ಹಗಲಿನಲ್ಲಿ 7 ತಾಸು ವಿದ್ಯುತ್ ನೀಡದೆ ಕೃಷಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ದೂರಿದರು.
ಹಲವು ಗ್ರಾಮಗಳಲ್ಲಿ ಹಗಲಿನಲ್ಲಿ ವಿದ್ಯುತ್ ಇರುವುದಿಲ್ಲ. ಮಧ್ಯರಾತ್ರಿ ವಿದ್ಯುತ್ ತೆಗೆಯಲಾಗುತ್ತಿದ್ದು, ಬೆಳೆಗಳಿಗೆ ಯಾವಾಗ ನೀರು ಹಾಯಿಸಬೇಕು. ಕರಡಿ, ಚಿರತೆ, ಹಂದಿ, ವಿಷಜಂತುಗಳ ಭಯ ನಮ್ಮನ್ನು ಕಾಡುತ್ತಿದೆ. ಕೂಡಲೇ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಕಲ್ಲಹಳ್ಳಿ, ಪಲ್ಲವಗೆರೆ, ರಾಮಜೋಗಿಹಳ್ಳಿ, ಬಾಲೇನಹಳ್ಳಿ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.