

ಕನಕಗಿರಿ: ಕನಕಗಿರಿಗೂ, ರಂಭಾಪುರಿ ಧರ್ಮಪೀಠಕ್ಕೂ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದ್ದು, ಇದೀಗ ಪಟ್ಟಣದಲ್ಲಿ ದೊಡ್ಡಮಟ್ಟದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನದಿಂದ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದಲ್ಲಿ ಶ್ರೀಮುಕ್ತಿ ಮಂದಿರ ಗುರುಕುಲ ಮಹಾವಿದ್ಯಾಲಯ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ನಿರ್ಮಾಣವಾಗಿರುವ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನ ಕಾಮಗಾರಿಯನ್ನು ಶನಿವಾರ ಪರಿಶೀಲನೆ ನಡೆಸಿ ಆಶೀರ್ವಚನ ನೀಡಿದರು.
ಈ ಹಿಂದೆ ತಡವಾಗಿದ್ದ ಕಾಮಗಾರಿ ಇನ್ಮುಂದೆ ತಡವಾಗುವುದಿಲ್ಲ. ವಾಸ್ತು ಹಾಗೂ ವಿನ್ಯಾಸದಿಂದ ಕೂಡಿರುವ ಸಮುದಾಯ ಭವನ ಕಟ್ಟಡವು ಗುಣಮಟ್ಟದ್ದಾಗಿದ್ದು, ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಉಳಿದಿರುವ ಸಣ್ಣ ಪುಟ್ಟ ಕೆಲಸಗಳು ಶೀಘ್ರವೇ ಮುಗಿಯಲಿದ್ದು, ಭಾದ್ರಪದ ಇಲ್ಲವೇ ಅಶ್ವೀಜ ಮಾಸದಲ್ಲಿ ಶಾಸ್ತ್ರೋಕ್ತ ಹಾಗೂ ವಿಧಿಬದ್ಧವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದರು.
ಭವನ ಉದ್ಘಾಟನೆಗಾಗಿ ಈಗಾಗಲೇ ನಾಲ್ಕೈದು ದಿನಾಂಕಗಳನ್ನು ಸಲಹಾ ಸಮಿತಿಗೆ ತಿಳಿಸಿದ್ದು, ಅದರಲ್ಲಿ ಒಂದು ದಿನವನ್ನು ನಿಗದಿಪಡಿಸಲಿದ್ದಾರೆ. ನಿರ್ಮಾಣಕ್ಕೆ ಸಹಕಾರ ನೀಡಿದವರಿಗೆ ಜಾತ್ಯತೀತ, ಪಕ್ಷಾತೀತವಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಪೀಠದಿಂದ ಕರೆಯಿದ್ದು, ಗಣ್ಯರನ್ನು ಸಮಿತಿಯವರು ಆಹ್ವಾನಿಸುವರು. ಕಾರ್ಯಕ್ರಮವನ್ನು ಜಾತಿ-ಭೇದ, ಪಕ್ಷ ಭೇದ ಮರೆತು ಊರ ಹಬ್ಬದಂತೆ ಆಚರಿಸಬೇಕಿದ್ದು, ಇದಕ್ಕೆ ಯುವಕರ ಶ್ರಮ ಅಗತ್ಯವಿದೆ ಎಂದು ಹೇಳಿದರು.
ಲಿಂಗಸುಗೂರಿನಲ್ಲಿ ಶರನ್ನವರಾತ್ರಿ: ಈ ವರ್ಷದ ರಂಭಾಪುರಿ ಧರ್ಮಪೀಠದ ಶರನ್ನವರಾತ್ರಿ ಕಾರ್ಯಕ್ರಮ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಅ.15ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದರು. ಜು.28ರಂದು ಲಿಂಗಸುಗೂರಿನಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶರನ್ನವರಾತ್ರಿ ಸಮಿತಿಗೆ ದೇವರ ಬಪ್ಪೂರಿನ ಶ್ರೀ ಅಭಿನವ ಗುರು ಗಜದಂಡ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಹಾಗೂ ಸ್ಥಳೀಯ ಶಾಸಕರಾದ ಮಾನಪ್ಪ ವಜ್ಜಲ್‌ರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು. ಶರನ್ನವರಾತ್ರಿಯಲ್ಲಿ 10 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.