ಸನ್ಮಾರ್ಗದಲ್ಲಿ ನಡೆಯುವ ಛಲವಿರಲಿ

30 nmt
Published on

ಚನ್ನಗಿರಿ: ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದ್ದು, ಮಹಾತ್ಮರ ಅಧ್ಯಾತ್ಮ ಚಿಂತನೆಗಳ ಅರಿವು ಜೀವನ ದ ಶ್ರೇಯಸ್ಸಿಗೆ ಮೂಲ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಂಗಳವಾರ ಶ್ರೀಮದ್ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಮಠದ ಉದ್ಘಾಟನೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು ಬೇಕು. ಸನ್ಮಾರ್ಗದಲ್ಲಿ ನಡೆಯುವ ಛಲ ಇರಬೇಕು. ಸುಖ- ಶಾಂತಿ ಬದುಕಿಗೆ ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆಯ ಅಗತ್ಯವಿದೆ. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ವಿಚಾರಧಾರೆಗಳನ್ನು ಬೋಧಿಸಿದ ಪಂಚಾಕ್ಷರ ಜಗದ್ಗುರುಗಳು ಅನಿರೀಕ್ಷಿತವಾಗಿ ನಲ್ಲೂರಿನಲ್ಲಿ ಶಿವೈಕ್ಯರಾದ ಕಾರಣ ಅವರ ಸಮಾಧಿ ಇಲ್ಲಿಯೇ ನಿರ್ವಣಗೊಂಡಿದೆ. ಶ್ರೀ ರೇಣುಕಪ್ಪನವರನ್ನು ಮೊದಲ್ಗೊಂಡು ಭಕ್ತರೆಲ್ಲರ ಪರಿಶ್ರಮ ಪ್ರಯತ್ನದಿಂದ ಸುಂದರ ಮಠ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ ಪ್ರತಿಷ್ಠಾಪನೆ ನಡೆದಿದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದ ಪ್ರಗತಿ ಮತ್ತು ಉನ್ನತಿಗೆ ಧರ್ಮ ದಿಕ್ಸೂಚಿಯಾಗಿದೆ. ಸತ್ಯ, ಸಂಸ್ಕೃತಿ, ಆದರ್ಶ ಮೌಲ್ಯಗಳನ್ನು ಈ ನಾಡಿನ ಮಠಗಳು ಉಳಿಸಿ ಬೆಳೆಸಿಕೊಂಡು ಬಂದಿವೆ. ಲಿಂ. ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಸುಂದರವಾಗಿ ನಿರ್ವಿುಸಿ ಗುರು ಕೃಪೆಗೆ ಪಾತ್ರರಾಗಿರುವುದು ತಮ್ಮೆಲ್ಲರ ಸೌಭಾಗ್ಯ ಎಂದರು.

ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನದಿ ಮನುಷ್ಯನ ದಾಹ ತೀರಿಸುತ್ತದೆ. ವೃಕ್ಷ ನೆರಳು, ಹೂವು, ಹಣ್ಣು ನೀಡುತ್ತದೆ. ಆಚಾರ್ಯರು ಮತ್ತು ಋಷಿಮುನಿಗಳು ಜ್ಞಾನ ಸುಧೆಯ ಮೂಲಕ ಇತರರ ಬಾಳನ್ನು ಬೆಳಗಿಸಿದ್ದಾರೆ. ಲಿಂ. ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳು ವೀರಶೈವ ಚಿಂತನೆಯನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ.

ಹುಣಸಘಟ್ಟ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ದುರಾಸೆ ಬೇಡ. ದುಡಿಮೆ ಮತ್ತು ಧರ್ಮವನ್ನು ನಂಬಿ ಬಾಳಲ್ಲಿ ಯಶಸ್ವಿ ಜೀವನ ಸೂತ್ರಗಳನ್ನು ಬೋಧಿಸಿ ಹರಸಿದ ಲಿಂ. ಶ್ರೀರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಕಟ್ಟಡ ನಿರ್ವಿುಸಿ ಗುರು ಕಾರುಣ್ಯಕ್ಕೆ ಪಾತ್ರರಾಗಿದ್ದೀರಿ ಎಂದು ತಿಳಿಸಿದರು.

ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬೀರೂರು ಬಾಳೆಹೊನ್ನೂರು ಖಾಸಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮೀಜಿ, ಹಣ್ಣೆ ಬೃಹನ್ಮಠದ ಸಿ.ಎಚ್. ಬಾಳನಗೌಡ್ರ, ವಾರ್ತಾ ಸಂಯೋಜನಾಧಿಕಾರಿ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಕಲಾದಗಿ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net