ಅಮೃತ ಮಹೋತ್ಸವದ ಸಂಭ್ರಮದಲ್ಲಿ ಬಾಳೆಹೊನ್ನೂರು ಪಿಎಸಿಎಸ್

06bhr 1 (1)
ಬಾಳೆಹೊನ್ನೂರಿನ ಅಮೃತ ಮಹೋತ್ಸವ ಆಚರಣೆ ಕಾರ್ಯಸಿದ್ಧತಾ ಸಂಕಲ್ಪ ಸಭೆಯನ್ನು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಬ್ಯಾನರ್ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು. ಎಂ.ಸಿ.ಚಂದ್ರಶೇಖರ್, ಎಚ್.ಉಮೇಶ್, ಕೆ.ಟಿ.ವೆಂಕಟೇಶ್, ಹಿರಿಯಣ್ಣ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್)ಯಶಸ್ವಿಯಾಗಿ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು , ಸೆಪ್ಟೆಂಬರ್‌ನಲ್ಲಿ ಅಮೃತ ಮಹೋತ್ಸವ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ತಿಳಿಸಿದರು.
ಪಟ್ಟಣದ ಪಿಎಸಿಎಸ್ ಸಭಾಂಗಣದಲ್ಲಿ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಕಾರ್ಯ ಸಿದ್ಧತಾ ಸಂಕಲ್ಪ ಸಭೆ ಹಾಗೂ ಅಂತರಾಷ್ಟ್ರೀಯ ಸಹಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರು ಪಿಎಸಿಎಸ್ 75 ವರ್ಷಗಳಿಂದ ನಿರಂತರವಾಗಿ ಈ ಭಾಗದ ರೈತರು, ಬೆಳೆಗಾರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 75 ವರ್ಷಗಳ ಹಿಂದೆ ಸಂಸ್ಥೆ ಹುಟ್ಟು ಹಾಕಿದ ಹಿರಿಯರ ಆಶಯದಂತೆ ಜನಪಯೋಗಿಯಾಗಿ ಮುನ್ನಡೆದುಕೊಂಡು ಬಂದಿದೆ.
ಕಳೆದ ಏಳೂವರೆ ದಶಕಗಳಿಂಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಆಡಳಿತ ಮಂಡಳಿ, ಸಿಬ್ಬಂದಿ ಸಂಸ್ಥೆ ಶ್ರೇಯೋಭಿವದ್ಧಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು ಸಂಸ್ಥೆ ಇಂದು ಅಮೃತ ಮಹೋತ್ಸವ ಆಚರಿಸಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಸಂಸ್ಥೆ ಷೇರುದಾರರು, ಗ್ರಾಹಕರು ಹಾಗೂ ಎಲ್ಲ ಸಹಕಾರಿಗಳು ಒಗ್ಗೂಡಿ ಅದ್ಧೂರಿಯಾಗಿ ಅಮೃತ ಮಹೋತ್ಸವ ಆಚರಿಸುವ ಸಂಕಲ್ಪ ಹೊಂದಲಾಗಿದೆ ಎಂದು ತಿಳಿಸಿದರು.
ಸಂಸ್ಥೆ ನಿರ್ದೇಶಕ ಕೆ.ಟಿ.ವೆಂಕಟೇಶ್ ಮಾತನಾಡಿ, 1816ರಲ್ಲಿ ಯುರೋಪ್‌ನಲ್ಲಿ ಸಮಾಜದ ಏಳ್ಗೆಗಾಗಿ ಸಹಕಾರಿ ಸಂಸ್ಥೆಗಳು ಆರಂಭಗೊಂಡಿದ್ದು, ಅವುಗಳು ಇಂದು ವಿಶ್ವವ್ಯಾಪಿಯಾಗಿ ಹರಡಿಕೊಂಡಿವೆ. ಜು.6ರಂದು ಅಂತರಾಷ್ಟ್ರೀಯ ಸಹಕಾರಿ ದಿನವಾಗಿ ಆಚರಣೆ ಮಾಡುತ್ತಿದ್ದು, ಇದು ವಿಶ್ವ ಸಂಸ್ಥೆ ಮಾನ್ಯತೆಯನ್ನೂ ಪಡೆದಿದೆ. ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸುವ ಬಗ್ಗೆ ಶೃಂಗಸಭೆಯಲ್ಲೂ ನಿರ್ಣಯ ಕೈಗೊಂಡಿದ್ದು, ಆರ್ಥಿಕ ಭದ್ರತೆ, ನ್ಯಾಯ, ಸತ್ಯ, ನಿಷ್ಠೆ, ಸಮಾಜದ ಶಾಂತಿ, ಪರಿಸರ ಉಳಿಸುವ ಕೆಲಸಗಳು ಸಹಕಾರ ಕ್ಷೇತ್ರದಿಂದ ಆಗಬೇಕು ಎಂಬ ಉದ್ದೇವನ್ನು ವಿಶ್ವಸಂಸ್ಥೆ ಹೊಂದಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ಸಿಇಒ ಎಚ್.ಉಮೇಶ್, ನಿರ್ದೇಶಕರಾದ ಹಿರಿಯಣ್ಣ, ಕೆ.ಟಿ.ಗೋವಿಂದೇಗೌಡ, ಎಂ.ಡಿ.ಕೃಷ್ಣಪ್ಪ, ಸುಧಾ ಎಸ್.ಪೈ.ಲೀಲಾವತಿ, ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಅಣ್ಣಪ್ಪ, ಸತೀಶ್, ನಂದನ್, ಚಿರಾಗ್, ಪ್ರಮೀತ್, ಕಿಶೋರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net