ಬಾಳೆಹೊನ್ನೂರು: ಪವಿತ್ರ ಕ್ಷೇತ್ರದಲ್ಲಿ ಬಿಎಸ್‌ವೈ ಬಗ್ಗೆ ಮಾತಾಡಲ್ಲ; ರಂಭಾಪುರಿ ಪೀಠದಲ್ಲಿ ಈಶ್ವರಪ್ಪ ಹೇಳಿಕೆ

25bhr 4
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವದಿಸಿದರು.
Published on

ಬಾಳೆಹೊನ್ನೂರು: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ. ಯಾವುದೇ ಸಂಧಾನಕ್ಕೂ ನಾನು ಒಪ್ಪಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಶ್ರೀ ರಂಭಾಪುರಿ ಪೀಠಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತೀ ವರ್ಷದಂತೆ ನಾನು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದೇನೆ. ನಾನು ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ದೇನೆ. ನೀವು (ಮಾಧ್ಯಮದವರು) ಕೇಳುವ ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ಯಡಿಯೂರಪ್ಪ ಅವರ ಬಗ್ಗೆ ಇಲ್ಲಿ ಮಾತನಾಡಲ್ಲ. ಅವರ ಬಗ್ಗೆ ಹೊರಗಡೆ ಏನು ಮಾತನಾಡಬೇಕೋ ಅದನ್ನು ಅಲ್ಲಿಯೇ ಮಾತನಾಡುತ್ತೇನೆ. ಈ ಪವಿತ್ರ ಕ್ಷೇತ್ರದಲ್ಲಿ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ. ದಯವಿಟ್ಟು ಇಲ್ಲಿ ಏನೂ ಕೇಳಬೇಡಿ ಎಂದರು.
ಈಶ್ವರಪ್ಪನವರ ಆಶೀರ್ವಾದ ಇದೆ ಎಂಬ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸನ್ನಿಧಾನದಲ್ಲಿ ನಾನು ಏನೂ ಮಾತನಾಡಲ್ಲ. ರಾಜಕೀಯ ಮಾತನಾಡಿ ಆ ಪಾಪ ಹೊತ್ತುಕೊಳ್ಳಲು ನಾನು ತಯಾರಿಲ್ಲ ಎಂದು ಉತ್ತರಿಸಿದರು.
ಜಗದ್ಗುರುಗಳ ಆಶೀರ್ವಾದ: ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಕೆ.ಎಸ್.ಈಶ್ವರಪ್ಪ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ, ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆದರು. ರಂಭಾಪುರಿ ಜಗದ್ಗುರುಗಳು ಈಶ್ವರಪ್ಪನವರಿಗೆ ಶಾಲು, ಹಾರ ಹಾಕಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಬಳಿಕ ಶ್ರೀಗಳೊಂದಿಗೆ ಈಶ್ವರಪ್ಪ ಕೆಲ ಕಾಲ ವೈಯಕ್ತಿಕವಾಗಿ ಮಾತುಕತೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net