7ರಂದು ನಾಪೋಕ್ಲುವಿನಲ್ಲಿ ಬೇಲ್ ನಮ್ಮೆ

3.npk-2
ನಾಪೋಕ್ಲು ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಆಯೋಜಿಸಿರುವ ಬೇಲ್ ನಮ್ಮೆಯ ಪೂರ್ವಸಿದ್ಧತೆಯನ್ನು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಪ್ರಮುಖರೊಂದಿಗೆ ಪರಿಶೀಲಿಸಿದರು.
Published on

ನಾಪೋಕ್ಲು: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನರಂಜನಾ ಕೂಟದ, ಬಿದ್ದಾಟಂಡ ಕುಟುಂಬಸ್ಥರ ಸಹಯೋಗದೊಂದಿಗೆ ಆ.7ರಂದು ಇಲ್ಲಿನ ಬಿದ್ದಾಟಂಡ ಕುಟುಂಬಸ್ಥರ (ಬುಟ್ಟಿಆಕ್) ಗದ್ದೆಯಲ್ಲಿ ಬೇಲ್ ನಮ್ಮೆ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.

ಇಲ್ಲಿಯ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಜರುಗಲಿರುವ ಬೇಲ್ ನಮ್ಮೆ ಪೂರ್ವಸಿದ್ಧತೆಯ ಬಗ್ಗೆ ಪ್ರಮುಖರೊಂದಿಗೆ ಪರಿಶೀಲಿಸಿ ಮಾತನಾಡಿ, ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ಬಳಿಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುವುದು. ಕೃಷಿ ಚಟುವಟಿಕೆಗೆ ಇನ್ನಷ್ಟು ಸಡಗರ ಸಂಭ್ರಮ ತುಂಬಿಕೊಳ್ಳಲು ಕಕ್ಕಡ 18ಕ್ಕೆ ಪೂರಕವಾಗಿ ಬೇಲ್ ನಮ್ಮೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೇಲ್ ನಮ್ಮೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುವುದು. ಕೂಡು ನಾಟಿ, ನಾಟಿ ಓಟದಂತಹ ಚಟುವಟಿಕೆ ಜತೆಯಲ್ಲಿ ಕೃಷಿಗೆ ಪೂರಕವಾದ ಆಟೋಟಗಳನ್ನು ಹಮ್ಮಿಕೊಳ್ಳಲಾಗುವುದು. ಕೊಡಗಿನಲ್ಲಿ ಬದುಕಿನ ಆಧಾರ ಕೃಷಿ ಆಗಿದ್ದು, ಅದನ್ನು ಉತ್ತೇಜಿಸಬೇಕು. ಕೃಷಿಯಾಧಾರಿತ ಬದುಕಿನಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಇದರ ಮುಖ್ಯ ಉದ್ದೇಶ ಎಂದರು.

ಕಾರ್ಯಕ್ರಮದಂದು ಸಾರ್ವಜನಿಕರನ್ನು ಒಳಗೊಂಡಂತೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ನೇತೃತ್ವದಲ್ಲಿ ಈ ಹಿಂದೆ ನಾಪೋಕ್ಲು ವಿನಲ್ಲಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿತ್ತು. ಕಳೆದ ವರ್ಷ ಸಾಂಕೇತಿಕವಾಗಿ ಮುತ್ತಾರುಮುಡಿ ಬೇಲ್ ನಮ್ಮೆಯನ್ನು ಅಕಾಡೆಮಿಯಿಂದ ಆಯೋಜಿಸಲಾಗಿತ್ತು. ಈ ವರ್ಷ ಮತ್ತಷ್ಟು ವೈಭವಪೂರ್ಣವಾಗಿ ಬೇಲ್ ನಮ್ಮೆ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ಈ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನರಂಜನಾ ಕೂಟದ ಅಧ್ಯಕ್ಷ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಯಸ್.ತಮ್ಮಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡಲ ಲವ ಚಿನ್ನಪ್ಪ, ಕಾರ್ಯದರ್ಶಿ ಚೇಕ್ ಪೂವಂಡ ಅಪ್ಪಚ್ಚು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಬಿದ್ದಾಟಂಡ ಕುಟುಂಬದ ಹಿರಿಯರಾದ ಡಿಕ್ಕಿ ಸೋಮಯ್ಯ ಮತ್ತು ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net