ವಿವಾದ ಕರ್ತರು ಗುರಿ ಸಾಧಿಸರು; ಬಾಲೇಹೊಸೂರು ದಿಂಗಾಲೇಶ್ವರ ಶ್ರೀಗಳ ಹೇಳಿಕೆ

DINGALESHWARA SRI
Published on

ಹರಪನಹಳ್ಳಿ:  ಕೆಲವೇ ಕಾವಿಧಾರಿಗಳಿಂದ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರ ವಿವಾದಕ್ಕೀಡಾಗಿದ್ದು, ಅಡ್ಡಿಪಡಿಸಿ ಉತ್ತರಾಧಿಕಾರಿ ವಿವಾದ ಹುಟ್ಟುಹಾಕುತ್ತಿರುವವರು ಕ್ಷಣಿಕ. ಅವರು ಗುರಿ ಮುಟ್ಟಲು ಆಗುವುದಿಲ್ಲ ಎಂದು ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ಭಾನುವಾರ ನಡೆದ ಧರ್ವರ್ಥ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮಠ ಹಾಗೂ ಭಕ್ತರು ಒಂದೇ ಕಡೆ ಇದ್ದಾರೆ. ಆದರೆ ಇದನ್ನು ಎರಡು ಭಾಗ ಮಾಡಬೇಕೆಂದು ಕೆಲವೇ ಕೆಲ ಕಾವಿಧಾರಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ಕಾವಿಧಾರಿಗಳು ಸುಮ್ಮನೆ ಕೈತೊಳೆದುಕೊಂಡು ಬಿಟ್ಟರೆ ಈ ವಿವಾದ ಸುಖ್ಯಾಂತವಾಗುತ್ತದೆ. ಇದರಲ್ಲಿ ರಾಜಕಾರಣವೂ ಇಲ್ಲ, ಜಾತಿನೂ ಇಲ್ಲ ಎಂದರು.

ನಾನು ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ 6 ವರ್ಷ ಗತಿಸಿವೆ. ಇದನ್ನು ತಡೆಯುವುದು ಅಸಾಧ್ಯ. ಯಾವುದು ಸತ್ಯವೆನ್ನುವುದು ಸಮಾಜಕ್ಕೆ ಗೊತ್ತಾಗಿದೆ. ಮುಂದೆ ಯಾರ ಗೌರವಕ್ಕೂ ಚ್ಯುತಿಯಾಗದಂತೆ 45 ದಿನಗಳ ಅವಧಿಯಲ್ಲಿ ಬಗೆಹರಿಸಲು ಬಿಟ್ಟಿದ್ದೇನೆ. ಅಷ್ಟರಲ್ಲಿ ಬಗೆಹರಿಸದಿದ್ದರೆ ಸಮಾಜವಿದೆ. ನನ್ನ ಪರವಾಗಿಯೂ ಸಮಾಜವಿದೆ. ಅದು ಯಾವುದನ್ನು ತೀರ್ಮಾನ ತೆಗೆದುಕೊಳ್ಳುತ್ತದೋ ಕಾದು ನೋಡೋಣ ಎಂದರು.

ಈ ವಿಚಾರದಲ್ಲಿ ಆಟ ಆಡುವ ಕಾವಿಧಾರಿಗಳು ಮಠ ಉಳಿಯಲು, ಬೆಳೆಯಲು ಬಿಟ್ಟರೆ ಎಲ್ಲ ಒಳ್ಳೆಯದಾಗುತ್ತದೆ. ಈಗಿನ ಗುರುಗಳನ್ನು ನನ್ನ ಜತೆ ಮಾತನಾಡಲು ಬಿಡುತ್ತಿಲ್ಲ. 15 ದಿನಗಳ ಹಿಂದೆ ನಾವು ಅವರ ಜತೆ 2 ತಾಸು ಮಾತನಾಡಿದ್ದೇವೆ ಎಂದು ತಿಳಿಸಿದರು. ಕಾವಿ ಕಾರಣದಿಂದ ಈ ವಿಚಾರ ಕಾವು ಏರುತ್ತಲಿದೆ. 3 ಕಾವಿಧಾರಿಗಳು ನನಗೆ ಅಡ್ಡಿ ಇದ್ದಾರೆ. ಅಗಲಿಸಬೇಕು ಎನ್ನುವುದಕ್ಕಿಂತ ಕೂಡಿಸುವುದಕ್ಕೆ ಕೈ ಹಾಕಿದರೆ ಅವರೂ ಆದರ್ಶ ವ್ಯಕ್ತಿಗಳಾಗುತ್ತಾರೆ. ಸತ್ಯ ಬಹಳ ದೂರಕ್ಕೆ ಪಸರಿಸುತ್ತದೆ.

ಆದರೆ, ಸಮಯ ತೆಗೆದುಕೊಳ್ಳುತ್ತದೆ. ನನ್ನ ಹಿಂದೆ ನನ್ನ ಪರವಾಗಿ ಸತ್ಯವಿದೆ. ನಾನು ಮಠವನ್ನು ಬೆನ್ನು ಹತ್ತಿಲ್ಲ. ಸತ್ಯವನ್ನು ಹಾಗೂ ಸಮಾಜವನ್ನು ಬೆನ್ನು ಹತ್ತಿದ್ದೇನೆ. ಹಿರಿಯರು ಈ ವಿವಾದ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ. ಈ ಸಂಬಂಧ ಈಗಾಗಲೇ ಚರ್ಚೆ ಆರಂಭವಾಗಿದೆ ಎಂದು ತಿಳಿದು ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net