

ಕಾಸರಗೋಡು: ನಗರದ ಚೌಕಿಯ ಸಿಪಿಸಿಅರ್‌ಐ ಕೇಂದ್ರದಲ್ಲಿ ನಡೆಯುತ್ತಿರುವ ಕೃಷ್ಯುತ್ಪನ್ನಗಳ ಪ್ರದರ್ಶನ ಅಗ್ರಿ ಎಕ್ಸ್‌ಪೋದಲ್ಲಿ ಉತ್ತರ ಭಾರತದಲ್ಲಿ ಚಿರಪರಿಚಿತವಾಗಿರುವ ಬೇಲ್ ಹಣ್ಣಿನ ಬಗ್ಗೆ ಗುಜರಾತ್ ಗೋದ್ರಾದ ಸಂಸ್ಥೆಯ ಪ್ರತಿನಿಧಿಗಳು ಕೃಷಿಕರೊಂದಿಗೆ ಸಮಗ್ರ ಮಾಹಿತಿ ಹಂಚಿಕೊಂಡರು.
ಅತ್ಯಂತ ಆರೋಗ್ಯದಾಯಕ ಪೇಯವಾಗಿರುವ ಬೇಲ್ ಹಣ್ಣಿನ ರಸವನ್ನು ಉತ್ತರ ಭಾರತದ ಜನತೆಗೆ ಪರಿಚಯಿಸಬೇಕಾದ ಅಗತ್ಯವಿಲ್ಲ. ಹಾದಿಬದಿ, ಗಲ್ಲಿಗಳಲ್ಲಿ ಔಷಧೀಯ ಗುಣವುಳ್ಳ ಈ ಪೇಯವನ್ನು ಮಾರಾಟಕ್ಕಿರಿಸಲಾಗುತ್ತಿದೆ. ಬಿಲ್ವಪತ್ರೆಯ ಎಲೆ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಬಿಲ್ವ ಪತ್ರೆಯ ದೊಡ್ಡ ಗಾತ್ರದ ಹಣ್ಣು ಇದಾಗಿದ್ದು, ಇದರ ಔಷಧೀಯ ಗುಣಗಳಿಂದ ಈ ಹಣ್ಣು ಹೆಚ್ಚು ಬಳಕೆಯಲ್ಲಿದೆ ಎಂದು ಸಂಸ್ಥೆ ಸಿಬ್ಬಂದಿ ಚಿತ್ರದುರ್ಗದ ಗಂಗಾಧರ್ ತಿಳಿಸಿದರು.
ಪುತ್ತೂರು ತಾಲೂಕಿನ ವಿವಿಧ ಗ್ರಾಪಂಗಳಿಂದ ಆಗಮಿಸಿದ ಕೃಷಿಕರಿಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾ.ರಮೇಶ್, ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ.ರಾಜ್‌ಕುಮಾರ್ ಕೃಷ್ಯುತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಸಿಪಿಸಿಆರ್‌ಐ 109ನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಕ್ಯಾಂಪಸ್ ವಠಾರದಲ್ಲಿ ನೂರಕ್ಕೂ ಮಿಕ್ಕಿ ಕೃಷ್ಯುತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಕಾರ್ಯಾಚರಿಸುತ್ತಿದೆ.