ಅಧ್ಯಕ್ಷೆಯಾಗಿ ಬಾಳವ್ವ, ಉಪಾಧ್ಯಕ್ಷೆಯಾಗಿ ಶರಣವ್ವ ಅವಿರೋಧ ಆಯ್ಕೆ

CDN 6-1j
Published on

ಚಡಚಣ: ಸ್ಥಳೀಯ ಪಪಂ 2ನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷೆಯಾಗಿ ಬಾಳವ್ವ ಪೀರಪ್ಪ ಅಗಸರ ಹಾಗೂ ಉಪಾಧ್ಯಕ್ಷೆಯಾಗಿ ಶರಣವ್ವ ಶಿವಪ್ಪ ಕಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಚಡಚಣ ತಹಸೀಲ್ದಾರ್ ಸುರೇಶ ಚವಲರ ಘೋಷಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಾತಿ ನಿಗದಿಗೊಳಿಸಲಾಗಿತ್ತು. ನಾಮಪತ್ರ ಸಲ್ಲಿಸಲು ನಿಗದಿಗೊಳಿಸಲಾಗಿದ್ದ ಬೆಳಗ್ಗೆ 11ರವರೆಗೆ ಅಧ್ಯಕ್ಷೆ ಸ್ಥಾನಕ್ಕೆ ವಾರ್ಡ್ ನಂ. 13ರ ಬಿಜೆಪಿ ಸದಸ್ಯೆ ಬಾಳವ್ವ ಪೀರಪ್ಪ ಅಗಸರ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ವಾರ್ಡ್ ನಂ. 2ರ ಬಿಜೆಪಿ ಸದಸ್ಯೆ ಶರಣವ್ವ ಶಿವಪ್ಪ ಕಟ್ಟಿ ಇವರಿಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ಘೋಷಿಸಲಾಯಿತು.

ಚುನಾವಣಾಧಿಕಾರಿಯ ಅಧಿಕೃತ ಘೋಷಣೆ ಹೊರಬೀಳುತ್ತಲೇ ಪಪಂ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಉಪಾಧ್ಯಕ್ಷ ಸುರೇಶಗೌಡ ಬಿರಾದಾರ, ನಾಗಠಾಣ ಮಂಡಲ ಅಧ್ಯಕ್ಷ ರಾಮ ಅವಟಿ, ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಮುಖಂಡರಾದ ಕಲ್ಲು ಉಟಗಿ, ಸಿದ್ದು ಗುಡ್ಡಾಪೂರ, ಅಪ್ಪುಗೌಡ ಬಿರಾದಾರ, ಶ್ರೀಮಂತ ಉಮರಾಣಿ ಸೇರಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿ ಸಿಪಿಐ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net