

ಗದಗ:
ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಆಯ್ಕೆಯಾದ ಶಾಲಾ ನಾಯಕರು, ಉಪ ನಾಯಕರು ಹಾಗೂ ಮಂತ್ರಿಮಂಡಳ ಸದಸ್ಯರಾಗಿ ಆಯ್ಕೆಯಾದವರ ಪ್ರಮಾಣ ವಚನ ಕಾರ್ಯಕ್ರಮ ಮಂಗಳವಾರ ಜರುಗಿತು.
ಎಸ್ಬಿಐ ಪ್ರಾದೇಶಿಕ ಮ್ಯಾನೇಜರ್ ಮಹದೇವಸ್ವಾಮಿ ಉದಯಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಯಕತ್ವ ಗುಣ ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಮಾಡುವ ಕೆಲಸದಲ್ಲಿ ಆಸಕ್ತಿ ಇರಬೇಕು. ಜೊತೆಗೆ ನಮಗೆ ಒಬ್ಬ ಆದರ್ಶ ವ್ಯಕ್ತಿಯಾಗಬೇಕೆಂಬ ಹುಮ್ಮಸ್ಸಿರಬೇಕು ಎಂದರು.
ಶಾಲಾ ನಿರ್ದೆಶಕ ವಿನಾಯಕ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಒಬ್ಬ ಉತ್ತಮ ನಾಯಕನಾಗಲು ನಮಗೆ ಒಂದು ಕನಸಿರಬೇಕು ಮತ್ತೆ ಅದನ್ನು ಸಾಧಿಸುವ ಛಲವಿರಬೇಕು. ಒಬ್ಬ ಉತ್ತಮ ನಾಯಕ ಕೇವಲ ಗೆಲುವಿಗಾಗಿ ಹೋರಾಡದೆ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕು. ನಾಯಕ ಕೇವಲ ತಾನೊಬ್ಬನೇ ಮುಂದೆ ಹೋಗದೆ ತನ್ನ ಸಂಗಡಿಗರೆಲ್ಲರಿಗೂ ಕರೆದುಕೊಂಡು ಹೋಗಬೇಕೆಂದು ಆಯ್ಕೆಯಾದ ಸಮಸ್ತ ಮಂತ್ರಿ ಮಂಡಳದ ಸದಸ್ಯರಿಗೆ ತಿಳಿಸಿ ಹೇಳಿದರು.
ಶಾಲಾ ನಾಯಕರಾಗಿ ಆಯ್ಕೆಯಾದ ಕು. ವಾರ್ಕರ ಮತ್ತು ಕು. ಬಾಲಾಜಿ ಪಾಣಗಂಟಿ ಮಾತನಾಡಿ ತಮಗೆಲ್ಲ ಪ್ರಜಾಪ್ರಭುತ್ವ ಚುನಾವಣೆ ಮಾದರಿಯಲ್ಲಿ ನಡೆಸಿದ ಚುನಾವಣೆ ಪ್ರಕ್ರಿಯೆಯನ್ನು ಪ್ರಶಂಸಿದರು. ತದನಂತರ ತಮಗೆಲ್ಲ ಮತ ನೀಡಿ ಆರಿಸಿದ ಮತದಾರರಿಗೆ ವಂದಿಸಿ ತಮಗೆ ಕೊಟ್ಟ ಎಲ್ಲ ಜವಾಬ್ದಾರಿ ಒಗ್ಗಟ್ಟಾಗಿ ನಿರ್ವಸುತ್ತೇವೆ ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯ ವಿ.ಎಂ. ಅಡ್ನೂರ, ಶಾಲಾ ನಾಯಕ ಮತ್ತು ಉಪ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ಎಸ್. ರವಿ, ಮಲ್ಲಿಕಾ ಆರ್ ಇತರರು ಇದ್ದರು.