

ಪುತ್ತೂರು: ಡಾ.ಶಿವರಾಮ ಕಾರಂತರ ಕರ್ಮಭೂಮಿ ಇಂದು ಸಾಹಿತ್ಯ ಹಾಗೂ ಕಲಾಸಕ್ತರ ಕೇಂದ್ರ, ಬಾಲವನವಾಗಿ ರೂಪುಗೊಂಡಿದೆ. ಈ ಮಧ್ಯೆ ಕಾರಂತರ ಬಗೆಗಿನ ಅಧ್ಯಯನ ಪೀಠ ವಿವಿಯಿಂದ ಪುತ್ತೂರಿನ ಬಾಲವನಕ್ಕೆ ವರ್ಗಾವಣೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.
ಮಂಗಳೂರು ವಿಶ್ವ ವಿದ್ಯಾಲಯದಲ್ಲಿರುವ 19 ಅಧ್ಯಯನ ಪೀಠಗಳಲ್ಲಿ ಡಾ.ಶಿವರಾಮ ಕಾರಂತ ಅಧ್ಯಯನ ಪೀಠವೂ ಒಂದು. ವಿವಿಯಲ್ಲಿರುವ ಬಹುತೇಕ ಪೀಠಗಳೆಲ್ಲ ಶ್ರೀಮಂತ ಪೀಠಗಳಾಗಿದ್ದು, ಮೂಲಧನ ಕೋಟಿ ರೂ. ಮೀರಿದೆ. ಆದರೆ ಡಾ.ಶಿವರಾಮ ಕಾರಂತ ಅಧ್ಯಯನ ಪೀಠದಲ್ಲಿ ಮೂಲಧನ 7 ಲಕ್ಷ ರೂ. ಮಾತ್ರ ಇದೆ. ಇದರಿಂದ ಬರುವ ವಾರ್ಷಿಕ ಬಡ್ಡಿ ಆದಾಯದಿಂದ ಸಣ್ಣಪುಟ್ಟ ಕಾರ್ಯಕ್ರಮ ಮಾತ್ರ ನಡೆಸಬಹುದು. ಆದರೆ ಇದೇ ಪೀಠವನ್ನು ಬಾಲವನಕ್ಕೆ ವರ್ಗಾಯಿಸಿದರೆ ಕಾರಂತರ ಬಗೆಗಿನ ಕಾರ್ಯಕ್ರಮಗಳಿಗೆ ಕಾರಂತ ಅಧ್ಯಯನ ಪೀಠದ ಮೂಲಧನದಿಂದದ ಬರುವ ಆದಾಯವನ್ನೆ ನೆಚ್ಚಿಕೊಳ್ಳುವುದು ತಪ್ಪುತ್ತದೆ.
ನೇರವಾಗಿ ರಾಜ್ಯ ಸರ್ಕಾರ ಅಥವಾ ಬಾಲವನ ಅಭಿವೃದ್ಧಿ ಟ್ರಸ್ಟ್ ಅನುದಾನದಿಂದ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದು ಸಮಿತಿಯ ವಾದ. ಬಾಲವನದಲ್ಲಿ ವಿಶಾಲ ಹಾಗೂ ಸುಸಜ್ಜಿತ ಸೆಮಿನಾರ್ ಹಾಲ್, ನಾಟ್ಯಾಲಯ, ಬಯಲು ರಂಗಮಂದಿರ, ಲೈಬ್ರೆರಿ, ಈಜುಕೊಳ, ಚಿನ್ನರ ಪಾರ್ಕ್ ಕಾರಂತರ ಮನೆ ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ಸರ್ಕಾರದಿಂದ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಯೂ ನಡೆದಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಕಾರಂತ ಅಧ್ಯಯನ ಪೀಠವನ್ನು ಬಾಲವನಕ್ಕೆ ವರ್ಗಾಯಿಸಿ ಕಾರಂತರ ಬಗೆಗಿನ ಕಾರ್ಯಕ್ರಮಗಳು ಕೇಂದ್ರೀಕೃತ ವ್ಯವಸ್ಥೆ ಮೂಲಕ ನಡೆದರೆ ಅರ್ಥಪೂರ್ಣ ಎಂಬ ಅಭಿಪ್ರಾಯ ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದೆ.
ವರ್ಗಾವಣೆ ಸಾಧ್ಯವೆ?
ಮಂಗಳೂರು ವಿವಿಯಿಂದ ಬಾಲವನಕ್ಕೆ ಕಾರಂತ ಅಧ್ಯಯನ ಪೀಠ ವರ್ಗಾವಣೆ ಮೇಲ್ನೋಟಕ್ಕೆ ಅಸಾಧ್ಯವಾದರೂ ಸರ್ಕಾರದ ಮಟ್ಟದಲ್ಲಿ ಇದು ಸಾಧ್ಯ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಂಗಳೂರು ವಿವಿಯಿಂದ ಕಾರಂತ ಅಧ್ಯಯನ ಪೀಠವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಡೆದು ಬಾಲವನಕ್ಕೆ ಪೀಠವನ್ನು ವರ್ಗಾಯಿಸಬಹುದು. ಈ ಬಗ್ಗೆ ತಾಂತ್ರಿಕ ಸಮಸ್ಯೆಯಾದಲ್ಲಿ ರಾಜ್ಯ ಸರ್ಕಾರ ಒಂದು ನಿರ್ದಿಷ್ಟ ಅನುದಾನ ನೀಡಿ ಬಾಲವನದಲ್ಲಿ ನೂತನ ಕಾರಂತ ಅಧ್ಯಯನ ಪೀಠ ರಚಿಸಬಹುದು.
ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಬಾಲವನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕಾರಂತ ಅಧ್ಯಯನ ಪೀಠ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ. ಕಾರಂತರ ಬಗೆಗಿನ ಅಧ್ಯಯನ ಪೀಠ ವಿವಿಯಿಂದ ಬಾಲವನಕ್ಕೆ ವರ್ಗಾವಣೆ ಅಥವಾ ನೂತನ ಅಧ್ಯಯನ ಪೀಠ ರಚನೆ ಬಗ್ಗೆ ಸಮಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
-ಡಾ.ಸುಂದರ್ ಕೇನಾಜೆ, ಬಾಲವನದ ವಿಶೇಷ ಕರ್ತವ್ಯ ಅಧಿಕಾರಿ