

ಮೈಸೂರು: ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ಮೂರ್ತಿ ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ತವರೂರು ಮೈಸೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು. ಈ ಸಮಾರಂಭದಲ್ಲಿ ಅರುಣ್ ಸಹ ಭಾಗಿಯಾಗಿದ್ದರು. ಬಳಿಕ ಬುಧವಾರ ರಾತ್ರಿ ಬೆಂಗಳೂರಿಗೆ ಬಂದ ಅರುಣ್, ಗುರುವಾರ ಸಂಜೆ ಮೈಸೂರಿಗೆ ಆಗಮಿಸಿದರು.
ಬಾಲರಾಮ ವಿಗ್ರಹ ಕೆತ್ತಿ, ಅದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಬಳಿಕ ಬಂದ ಅವರನ್ನು ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಆತ್ಮೀಯತೆವಾಗಿ ಬರಮಾಡಿಕೊಂಡರು.
ಮೊದಲಿಗೆ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿದ ಶಿಲ್ಪಿ ಅರುಣ್, ಬಳಿಕ ನಗರದ ಬಸವೇಶ್ವರ ವೃತ್ತದಲ್ಲಿರುವ ತಮ್ಮ ನಿವಾಸ ‘ಕಶ್ಯಪ ಕಲಾನಿಕೇತನ’ಕ್ಕೆ ಆಗಮಿಸಿದರು. ಅವರ ಆಗಮನದಿಂದ ಅವರ ಮನೆಯಲ್ಲಿ ಸಡಗರ ಮೇಳೈಸಿತ್ತು. ಬಹಳ ದಿನಗಳ ಬಳಿಕ ಇವರನ್ನು ನೋಡಿದ ಕುಟುಂಬದವರ ಕಣ್ಣಿನಲ್ಲಿ ಆನಂದಭಾಷ್ಪ ಜಿನುಗಿತು.
ಕುಟುಂಬದ ಸದಸ್ಯರಾದ ತಾಯಿ ಸರಸ್ವತಿ, ಪತ್ನಿ ವಿಜೇತಾ, ಮಕ್ಕಳಾದ ಸಾನ್ವಿ, ವೇದಾಂತ್, ಸಹೋದರ ಸೂರ್ಯಪ್ರಕಾಶ್ ಸೇರಿದಂತೆ ಸಂಬಂಧಿಕರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. ಸಾರ್ವಜನಿಕರು, ನೆರೆಹೊರೆಯವರು, ಮಿತ್ರರು ಅರುಣ್ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ ಸ್ವಾಗತ ಕೋರಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಿ ಅರುಣ್, ಕಲಾ ಸೇವೆಯಲ್ಲಿ ಮುಂದುವರಿಯುತ್ತೇನೆ. ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಾಜಕೀಯಕ್ಕೆ ಬರುವ ಆಸಕ್ತಿಯೂ ನನಗೆ ಇಲ್ಲ. ಯುವಕರು ಕುಲಕಸುಬು ನಂಬಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದು. ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.
ನನ್ನ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡಿದ್ದೇನೆ. ನನಗೆ ಇಷ್ಟೊಂದು ಪ್ರೀತಿ, ಅದ್ದೂರಿ ಸ್ವಾಗತ ಸಿಗುತ್ತದೆಂದು ಅಂದುಕೊಂಡಿರಲಿಲ್ಲ. ಬೆಂಗಳೂರಿನಲ್ಲಿ ನನ್ನನ್ನು ನೋಡಲು ತುಂಬ ಜನ ಬಂದಿದ್ದರು. ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಮೈಸೂರಿಗೆ ಬರುತ್ತಿದ್ದಂತೆ ಅರಮನೆಗೆ ಭೇಟಿ ನೀಡಿದ್ದೆ. ಯದುವೀರ ಅವರನ್ನು ಮಾತನಾಡಿಸಿ ಬಂದಿದ್ದೇನೆ. ಅವರೊಂದಿಗೆ ನನ್ನ ಅನುಭವ ಹೇಳಿಕೊಂಡಿದ್ದೇನೆ. ಕಲೆ ಬೆಳೆಯಲು ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದೆ. ನಮ್ಮ ರಾಜಗುರು ಶಿಲ್ಪಿ ಸಿದ್ದಲಿಂಗಸ್ವಾಮಿ ಅವರಿಗೆ ಮೈಸೂರು ಮಹಾರಾಜರು ಆಶ್ರಯ ಕೊಟ್ಟಿದ್ದರು ಎಂದರು.
ನಾಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಆಗುತ್ತೇನೆ. ಅದಕ್ಕಾಗಿ ಸ್ವಾಮೀಜಿ ಅವರ ಸಮಯ ಕೇಳಿದ್ದೇನೆ. ಮಧ್ಯಾಹ್ನ ನಮ್ಮೂರಿನಲ್ಲಿರುವ ತಂದೆಯ ಸಮಾಧಿ ಬಳಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿದರು.
5 ವರ್ಷದ ಬಾಲಕನ ಪ್ರತಿರೂಪದಂತೆ ಶ್ರೀರಾಮಮೂರ್ತಿ ಸಿದ್ಧಪಡಿಸಲು ಆಯ್ಕೆಯಾದ ಶಿಲ್ಪಿಗಳಲ್ಲಿ ಅರುಣ್ ಕೂಡ ಒಬ್ಬರು. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಗುಜ್ಜೆಗೌಡನಪುರದಲ್ಲಿರುವ ಜಮೀನಿನಲ್ಲಿ ದೊರೆತ ಕೃಷ್ಣಶಿಲೆಯಲ್ಲಿ ಅರುಣ್ ಕೈಚಳಕದಲ್ಲಿ ಈ ಮೂರ್ತಿ ರೂಪು ಪಡೆದುಕೊಂಡಿತ್ತು.
8 ಅಡಿ ಎತ್ತರ, ಮೂರೂವರೆ ಅಡಿ ಅಗಲದ ಈ ವಿಗ್ರಹ ಕೆತ್ತನೆ ಮಾಡಲು ಅರುಣ್, 6 ತಿಂಗಳು ಸಮಯ ತೆಗೆದುಕೊಂಡಿದ್ದರು. ಕಠಿಣ ಶ್ರಮವಹಿಸಿ ತಯಾರಿಸಿದ ಮೂರ್ತಿಯೇ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿದೆ. ಈ ವಿಗ್ರಹಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಿಂದ ಅರುಣ್ ಸಹ ಜನಪ್ರಿಯತೆ ಪಡೆದುಕೊಂಡಿದ್ದಾರೆ.