

ಬಳಂಜಿಕೆರೆಯಲ್ಲಿ ಶತಮಾನ ಕಂಡಿರುವ ಸನ್ನಿಧಿ
ಸಿದ್ದಾಪುರ : ಮಡಿಕೇರಿ ತಾಲೂಕು ಅರೆಕಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಂಜಿಕೆರೆ ಗ್ರಾಮದ ತೋಟವೊಂದರಲ್ಲಿ ನೆಲೆಸಿರುವ ಶ್ರೀ ಐದ್ರೋಡಮ್ಮ ಚಾಮುಂಡೇಶ್ವರಿ ದೇವಿ ಭಕ್ತರ ಇಷ್ಟಾರ್ಥ ಸಿದ್ಧಿಸುವ ಮಾತೆಯಾಗಿದ್ದಾಳೆ.ಜಿಲ್ಲೆ- ಹೊರ ಜಿಲ್ಲೆಗಳಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶಕ್ತಿ ದೇವತೆ ಸನ್ನಿಧಿಯಲ್ಲಿ ಬೇಡಿಕೆ ಇಟ್ಟು ಭಕ್ತಿಯಿಂದ ಆಗಮಿಸಿದ ಶ್ರದ್ಧಾಳುಗಳಿಗೆ ಜೀವನವೇ ಸುಧಾರಣೆಯಾಗಿದೆ. ಅನಿಷ್ಟಗಳು ಬಗೆಹರಿದು ಬೆಳಕು ಕಂಡಿದೆ. ಹಾಗಾಗಿ ಇದು ಈ ಭಾಗದ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ. ಅರೆಕಾಡು ಗ್ರಾಮದ ಬಳಂಜಿಕೆರೆಯಲ್ಲಿ ನೆಲೆ ನಿಂತಿರುವ ಚಾಮುಂಡೇಶ್ವರಿ ಅಮ್ಮನ ಸನ್ನಿಧಿಗೆ 100 ವರ್ಷಕ್ಕೂ ಅಧಿಕ ಇತಿಹಾಸವಿದೆ. ಈ ದೇವಿಯು ಅರಸಿಕಟ್ಟೆ ಅಮ್ಮನ ಸಹೋದರಿ ಎಂದೇ ಖ್ಯಾತವಾಗಿದೆ. ಆಕೆಯ ತದ್ರೂಪಿ ಅವತಾರ ಎಂದೇ ನಂಬಲಾಗಿದೆ. ಜಾತ್ರೆ ಸಂದರ್ಭವನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಭಕ್ತರೇ ನೇರವಾಗಿ ಅಮ್ಮನವರಿಗೆ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸಿ ಅರರಿಯನ್ನೂ ಮಾಡಬಹುದು. ಭಕ್ತರ ಹರಕೆಯನ್ನು ಸ್ವಿಕರಿಸುವ ತಾಯಿ ಚಾಮುಂಡೇಶ್ವರಿಯು ಶ್ರದ್ಧಾಳುಗಳ ಇಷ್ಟಾರ್ಥ ಸಿದ್ಧಿ ಮಾಡುತ್ತಾಳೆ. ದೇವಿಗೆ ಜಿಲ್ಲೆಯಲ್ಲಿ ಮಾತ್ರವಲ್ಲ, ನೆರೆ ಜಿಲ್ಲೆಯಲ್ಲೂ, ಹೊರ ರಾಜ್ಯದಲ್ಲೂ ಭಕ್ತರು ಇದ್ದಾರೆ. ಒಮ್ಮೆ ನಂಬಿದವರು ದೇವಿಯ ಪೂಜೆಗೆ ಮತ್ತೆ ಮತ್ತೆ ಆಗಮಿಸಿ ಹರಕೆ ಒಪ್ಪಿಸುವುದು ವಾಡಿಕೆಯೇ ಆಗಿದೆ. ಮಡಿಕೇರಿಯಿಂದ ಮರಗೋಡು ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳುವ ಜಿಲ್ಲಾ ಹೆದ್ದಾರಿಯ ಟಾಟಾ ಕಾಫಿ ಸಂಸ್ಥೆಯ ಬಲಜಿಗೆರೆ ಎಂಬ ಸ್ಥಳದಲ್ಲಿ ದೇವಿಯ ಸನ್ನಿಧಿ ಇದೆ. ಹಿಂದಿನ ಕಾಲದಲ್ಲಿ ಇಲ್ಲಿ ವಾಸವಿದ್ದ ಹಿರಿಯರು ತೋಟದ ನಡುವೆ ಇದ್ದ ಜೇನುಮರದ ಅಡಿಯಲ್ಲಿ ದೇವಿಯನ್ನು ಪೂಜಿಸುತ್ತಿದ್ದರು ಎನ್ನಲಾಗಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿದಂತೆ ಕಾಫಿ ,ಕರಿಮೆಣಸು ಫಸಲು ಸಮಯದಲ್ಲಿ ದೇವಾಲಯ ಪ್ರವೇಶಕ್ಕೆ ತೋಟದ ವ್ಯವಸ್ಥಾಪಕರು ಅಡಚಣೆ ಮಾಡುತ್ತಿದ್ದರು. ಹಾಗಾಗಿ ರಸ್ತೆ ಸಮೀಪದಲ್ಲಿ ಇರುವ ಅರಳಿಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕಾರ್ಯ ದಶಕಗಳ ಹಿಂದೆಯೇ ಆರಂಭವಾಯಿತು. ಪುತ್ತೂರಿನಿಂದ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.