ಬಾಲಕಿಗೆ ಮೃತ ಯುವಕನ ಹೃದಯ ಕಸಿ: ನಾರಾಯಣ ಹೃದಯಾಲಯದಿಂದ ಯಶಸ್ವಿ ಶಸಚಿಕಿತ್ಸೆ

IMG-20200103-WA0057
Published on

ಆನೇಕಲ್: ಅಪಘಾತದಲ್ಲಿ ಮೃತಪಟ್ಟ ಯುವಕನ ಹೃದಯವನ್ನು ಬಾಲಕಿಗೆ ಕಸಿ ಮಾಡುವಲ್ಲಿ ನಾರಾಯಣ ಹೃದಯಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ಯುವಕನ ಹೃದಯವನ್ನು ಕುಟುಂಬದವರ ಸಮ್ಮತಿ ಮೇರೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಕಸಿ ಮಾಡಲಾಗಿದೆ. ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೋಪಾನವಾಗಿ ಹೃದಯ ಸಾಗಿಸಿದ ವೈದ್ಯರ ತಂಡ ಯಶಸ್ವಿಯಾಗಿ ಶಸಚಿಕಿತ್ಸೆ ಮಾಡಿದೆ.

3 ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕೊಪ್ಪಳ ಮೂಲದ 6ನೇ ತರಗತಿ ವಿದ್ಯಾರ್ಥಿನಿ ಕಾರ್ಡಿಯೋಮಿಯೋಪಥಿ ಕಾಯಿಲೆಯಿಂದ ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ತಜ್ಞ ಡಾ.ಶಶಿರಾಜ್ ಅವರು ಹೃದಯ ಕಸಿ ಮಾಡಲು 3 ತಿಂಗಳಿಂದ ಬಾಲಕಿಗೆ ಸರಿಹೊಂದುವ ಹೃದಯಕ್ಕಾಗಿ ಎದುರು ನೋಡುತ್ತಿದ್ದರು ಎನ್ನಲಾಗಿದೆ.

ಬೈಕ್ ಅಪಘಾತ: ಜ.2ರಂದು ಸಂಜೆ ಬೈಕ್ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ಬೆಂಗಳೂರಿನ 23 ವರ್ಷದ ಯುವಕ ಜ.3ರಂದು ಮೃತಪಟ್ಟಿದ್ದ. ಯುವಕನ ಪಾಲಕರು ಮೃತನ ಅಂಗಾಂಗ ದಾನ ಮಾಡಲು ಸಮ್ಮತಿ ಸೂಚಿಸಿದ್ದರಿಂದ ವೈದ್ಯರ ತಂಡ ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ 25 ನಿಮಿಷದಲ್ಲಿ 31 ಕಿಮೀ ದೂರದ ನಾರಾಯಣ ಹೃದಯಾಲಯಕ್ಕೆ ಹೃದಯ ರವಾನಿಸಿ ಕಸಿ ಮಾಡುವಲ್ಲಿ ಯಶ ಕಂಡಿದೆ.

ಬಾಲಕಿ ಚೇತರಿಕೆ: ಡಾ.ವರುಣ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ನಗರ ಪೊಲೀಸರ ಹಸಿರು ಪಥ ಸಂಚಾರದ ನೆರವಿನಿಂದ ನಿಗದಿತ ಅವಧಿಗೆ ಹೃದಯ ಸಾಗಿಸಿದೆ. ಡಾ.ಅರುಣ್ ಶೆಟ್ಟಿ, ಡಾ.ಜುಲಿಯಸ್ ಪೊನ್ನೆನ್, ಅರಿವಳಿಕೆ ತಜ್ಞ ವೈದ್ಯರ ತಂಡ, ಅರೆ ವೈದ್ಯಕೀಯ ತಂಡದ ಶ್ರಮದಿಂದಾಗಿ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net