ಮೇ 15ರವರೆಗೆ ನೀರು ಪೂರೈಕೆ ಸಾಧ್ಯ: ಪೌರಾಯುಕ್ತ ರಾಯಪ್ಪ

udp-12-balakedara vedike
Published on

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಮೇ 15ರವರೆಗೆ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಬಾವಿ ಮತ್ತು ಬೋರ್​ ವೆಲ್​ ರಿಜಾರ್ಜ್​ ಮಾಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ರಾಯಪ್ಪ ಹೇಳಿದರು.

ಮಂಗಳವಾರ ತಾಪಂ ಸಭಾಂಗಣದಲ್ಲಿ ಬಳಕೆದಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಮಸ್ಯೆ, ಬೇಡಿಕೆ ಹಾಗೂ ಕುಂದು ಕೊರತೆಗಳ ಕುರಿತ ನೇರ ಮುಖಾಮುಖಿ ಸಂವಾದದಲ್ಲಿ ಮಾತನಾಡಿದರು.

ಕಿನ್ನಿಮೂಲ್ಕಿ, ಮಣಿಪಾಲ, ಸಂತೆಕಟ್ಟೆ ಮೊದಲಾದ ಎತ್ತರದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗದಿದ್ದರೆ ಟ್ಯಾಂಕರ್​ ಮೂಲಕ ನೀರು ಪೂರೈಸಲಾಗುವುದು. ಈಗಾಗಲೇ ಟ್ಯಾಂಕರ್​ಗೆ ಟೆಂಡರ್​ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಸುಮಾರು 50 ರಿಂದ 56 ಕಟ್ಟಡಗಳು ಅನುಮತಿಗಿಂತ ಹೆಚ್ಚುವರಿಯಾಗಿ ಮಹಡಿಗಳನ್ನು ನಿರ್ಮಿಸಿದ್ದು, ಇವುಗಳಿಗೆ 2 ಪಟ್ಟು ದಂಡವಿಧಿಸಿ ವಸೂಲಿ ಮಾಡಲಾಗಿದೆ. ಕಾನೂನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತೆರವು ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಉಡುಪಿ ನಗರಸಭೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದ್ದು, ಕಟ್ಟಡ, ನೀರು, ಜಾಹಿರಾತು, ಉದ್ದಿಮೆ ಪರವಾನಿಗೆ ಸಹಿತ ವಿವಿಧ ತೆರಿಗೆಗಳಿಂದ ವಾರ್ಷಿಕ 40 ರಿಂದ 45 ಕೋಟಿ ರೂ. ಆದಾಯ ಹೊಂದಿದೆ. ತೆರಿಗೆ ಪಾವತಿ ಬಾಕಿ ಇರುವವರ ಪಟ್ಟಿ ಮಾಡಲಾಗಿದ್ದು, ವಸೂಲಿಗೆ ನೋಡಲ್​ ಅಧಿಕಾರಿ ನೇಮಿಸಲಾಗಿದೆ. ಪೇಪರ್​ ಲೆಸ್​ ಆಫೀಸ್​ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರೆತಿದ್ದು, ಪ್ರಾಯೋಗಿಕವಾಗಿ 2 ವಿಭಾಗಗಳನ್ನು ಆಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್​ ಶೆಟ್ಟಿ ಗುರ್ಮೆ ಉದ್ಘಾಟಿಸಿದರು. ಬಳಕೆದಾರರ ವೇದಿಕೆ ಮಾಜಿ ಸಂಚಾಲಕ ಎ.ಪಿ. ಕೊಡಂಚ, ಉಡುಪಿ ತಹಶೀಲ್ದಾರ್​ ಗುರುರಾಜ್​, ಮೆಸ್ಕಾಂ ಅಭಿಯಂತರ ಗಣರಾಜ ಭಟ್​, ತಾಪಂ ಮ್ಯಾನೇಜರ್​ ರ್ಜಾನಾ ಉಪಸ್ಥಿತರಿದ್ದರು. ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರೂಪಿಸಿ, ಎನ್​. ರಾಮ ಭಟ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net