

ಕಮಲಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಅಗತ್ಯ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಒಟ್ಟು ೧೦೩ ವಿದ್ಯಾರ್ಥಿಗಳಿದ್ದು, ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಶೌಚಗೃಹ ಮತ್ತು ಸ್ನಾನಕ್ಕೂ ನೀರಿಲ್ಲದೆ ಪರದಾಡುತ್ತಿದ್ದೇವೆ. ಕುಡಿಯುವ ನೀರಂತೂ ಬರುವುದೇ ಇಲ್ಲ. ೧೦ ಸ್ನಾನಗೃಹಗಳಿದ್ದು, ನಾಲ್ಕು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಇನ್ನುಳಿದವು ದುರ್ಗಂಧ ಬೀರುತ್ತಿವೆ. ನೂರು ವಿದ್ಯಾರ್ಥಿಗಳ ಸ್ನಾನಕ್ಕೆ ಕೇವಲ ಮೂರು ಬಕೆಟ್‌ಗಳಿದ್ದು, ನಿತ್ಯ ಸರದಿ ಸಾಲಿನಲ್ಲಿ ನಿಂತು ಸ್ನಾನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳಪೆ ಆಹಾರ ಧಾನ್ಯ ಹಾಗೂ ತರಕಾರಿ ನೀಡುತ್ತಿದ್ದು, ಆಹಾರವೂ ಸರಿಯಾಗಿರಲ್ಲ ಎಂದು ಕಿಡಿಕಾರಿದರು.
ಕೂಡಲೇ ಮೇಲಧಿಕಾರಿಗಳು ಹಾಸ್ಟೆಲ್ ಭೇಟಿ ನೀಡಿ ಸಮಸ್ಯೆ ಆಲಿಸಬೇಕು, ಅಲ್ಲದೆ ನಮ್ಮೆಲ್ಲ ಬೇಡಿಕೆ ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಪ್ರದೀಪ್ ಭಾಲ್ಕಿಕರ್, ಮೈಲಾರಿ, ಗುರುಪ್ರಸಾದ, ಶಿವಶಂಕರ, ಕುಮಾರ, ನಿಲೇಶ, ಪ್ರವೀಣ, ಶ್ರೀನಾಥ, ಬೀರಪ್ಪ ಯೋಗೆಶ, ನಾಗರಾಜ, ಅನೂಪ್, ಮಲ್ಲಿಕಾರ್ಜುನ, ಬಾದಲ್, ವಿನಯಕುಮಾರ ಇತರರಿದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಆಹಾರಧಾನ್ಯ ಹಾಸ್ಟೆಲ್‌ಗೆ ಸರಬರಾಜು ಮಾಡಲಾಗುತ್ತಿದೆ. ಸಮರ್ಪಕ ಪರಿಶೀಲನೆ ಮಾಡಿಯೇ ಆಹಾರ ಪದಾರ್ಥ ಸಿದ್ಧಪಡಿಸಲಾಗುತ್ತಿದೆ. ಇನ್ನು ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಶನಿವಾರದಿಂದಲೇ ದೊಡ್ಡ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತೇನೆ.
| ದೀಪಕ್‌ಸಿಂಗ್, ವಾರ್ಡನ್