ಬಾಳಗಂಚಿ ಕೆರೆಗೆ ಬಾಗಿನ ಅರ್ಪಣೆ

22 HRS 01
ಹಿರೀಸಾವೆ ಹೋಬಳಿ ಬಾಳಗಂಚಿ ಗ್ರಾಮದ ಕೆರೆಯು ವ್ಯಾಪಕವಾಗಿ ಸುರಿದ ಮಳೆಯಿಂದ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಂಗಳವಾರ ಬಾಗಿನ ಅರ್ಪಿಸಲಾಯಿತು. ಅನಿತಾ ಕುಮಾರಸ್ವಾಮಿ, ಪರಮೇಶ್, ಗೋವಿಂದೇಗೌಡ, ಚಂದ್ರೇಗೌಡ, ಪವನ್, ಪ್ರಸನ್ನ ಇದ್ದರು.
Published on

ಹಿರೀಸಾವೆ: ಕೆರೆ-ಕಟ್ಟೆಗಳು ತುಂಬಿದರೆ ರೈತನ ಮನೆಯ ಕಣಜದಲ್ಲಿ ದವಸ-ಧಾನ್ಯಗಳು ತುಂಬಿದಷ್ಟೇ ನೆಮ್ಮದಿ ಸಿಗಲಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಕುಮಾರಸ್ವಾಮಿ ಹೇಳಿದರು.

ಹೋಬಳಿಯ ಬಾಳಗಂಚಿ ಗ್ರಾಮದ ಕೆರೆಯು ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಮಂಗಳವಾರ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿ, ರೈತರ ಬದುಕಿಗೆ ಕೆರೆ-ಕಟ್ಟೆಗಳೇ ಜೀವಾಳ ಎಂದರು.

ಪೂರ್ವ ಮುಂಗಾರಿನಲ್ಲಿ ತಕ್ಕಮಟ್ಟಿಗೆ ಮಳೆಯಾಗಿತ್ತು. ಆದರೆ ಕಳೆದ 20-25 ದಿನಗಳಿಂದ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕೆರೆ ತುಂಬಿದ್ದು ಸೋಮವಾರ ಮುಂಜಾನೆ ಕೋಡಿ ಹರಿಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಕೆರೆ ತುಂಬಿದರೆ ಬಾಳಗಂಚಿ, ಹೊನ್ನಮಾರನಹಳ್ಳಿ, ತಿಮ್ಮಲಾಪುರ ಹಾಗೂ ಬ್ಯಾಡರಹಳ್ಳಿ ಸೇರಿದಂತೆ ಅಕ್ಕಪಕ್ಕದ 8-10 ಗ್ರಾಮಗಳಿಗೆ ಅನುಕೂಲವಾಗಲಿದೆ. ಅಂತರ್ಜಲ ಚೇತರಿಕೆಯೊಂದಿಗೆ ವ್ಯಾಪ್ತಿಯ ಕೊಳವೆ ಬಾವಿಗಳು ಸುಧಾರಣೆ ಕಂಡು ಸಾಕಷ್ಟು ಪ್ರಮಾಣದಲ್ಲಿ ನೀರೊದಗಿಸಲಿದ್ದು, ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಬಾಳಗಂಚಿ ಗ್ರಾಮದ ಕೆರೆಯು 360 ಎಕರೆ ಇದ್ದು, 2 ಕಿ.ಮೀ. ಉದ್ದದ ಏರಿ ಹೊಂದಿದೆ. ಮೂರು ತೂಬುಗಳನ್ನು ಅಳವಡಿಸಿದ್ದು ಮೂರು ಕಡೆ ಕೋಡಿ ಇದೆ. ಕೆರೆ ತುಂಬಿದರೆ ಮುಂದಿನ 7-8 ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.

25 ವರ್ಷಗಳ ಬಳಿಕ ತುಂಬಿದ ಕೆರೆ: ಕಳೆದ 25 ವರ್ಷಗಳ ಬಳಿಕ ಮೊದಲ ಬಾರಿಗೆ ಮಳೆ ನೀರಿನಿಂದ ಕೆರೆ ತುಂಬಿ ಹರಿಯುತ್ತಿದ್ದು ರೈತರಲ್ಲಿ ಸಂತಸ ತಂದಿದೆ. 2022ರಲ್ಲಿ ಹಿರೀಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ಈ ಕೆರೆಯನ್ನು ತುಂಬಿಸಲಾಗಿತ್ತು. ಮತಿಘಟ್ಟ ಹಾಗೂ ಹಿರೀಸಾವೆ ಕೆರೆ ತುಂಬಿದ ಬಳಿಕ ಹಳ್ಳದ ಮೂಲಕ ಬಾಳಗಂಚಿ ಕೆರೆಗೆ ನೀರು ಹರಿಸಲಾಗಿತ್ತು. ಇದನ್ನು ಹೊರತುಪಡಿಸಿದರೆ ಅದರ ಹಿಂದಿನ 22 ವರ್ಷಗಳ ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗದ ಪರಿಣಾಮ ಕೆರೆ ತುಂಬಿರಲಿಲ್ಲ. 2023ರಲ್ಲಿ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿರಲಿಲ್ಲ. ಸದ್ಯ ಈ ಬಾರಿ ವ್ಯಾಪಕವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆ ತುಂಬಿ ಕೋಡಿ ಬಿದ್ದಿದೆ.

ಪ್ರಧಾನ ಅರ್ಚಕ ದೀಪಕ್ ಸ್ವಾಮೀಜಿ ಗಂಗೆ ಪೂಜೆ ನೆರವೇರಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪರಮೇಶ್, ಗ್ರಾಮದ ಪ್ರಮುಖರಾದ ಗೋವಿಂದೇಗೌಡ, ಚಂದ್ರೇಗೌಡ, ಪವನ್, ಪ್ರಸನ್ನ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net