ಬ್ಯಾಡಗಿ ಪುರಸಭೆಗೆ ಬಾಲಚಂದ್ರಗೌಡ್ರ ಅಧ್ಯಕ್ಷ

Balachandra Gowdra is the Chairman of Badagi Municipality
Published on

ಬ್ಯಾಡಗಿ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಬಾಲಚಂದ್ರಗೌಡ್ರ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸುಭಾಸ ಮಾಳಗಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 23 ಸದಸ್ಯ ಬಲದ ಪೈಕಿ ಬಿಜೆಪಿ 17 ಹಾಗೂ ಕಾಂಗ್ರೆಸ್ 6 ಸದಸ್ಯರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಾಲಚಂದ್ರಗೌಡ್ರ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಮಾಳಗಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಚುನಾವಣಾಧಿಕಾರಿ ಪಿರೋಜ್ ಷಾ ಸೋಮನಕಟ್ಟೆ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.
ತಂದೆ ಬಳಿಕ ಅಧ್ಯಕ್ಷ ಹುದ್ದೆಗೇರಿದ ಮಗ: 2002ರಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಬ್ಯಾಡಗಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 22 ವರ್ಷಗಳ ಬಳಿಕ ಅವರ ಪುತ್ರ ಬಾಲಚಂದ್ರಗೌಡ್ರ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಂದೆ ಅಲಂಕರಿಸಿದ್ದ ಸ್ಥಾನಕ್ಕೇರಿದರು.

ಅತಿ ಕಿರಿಯ ಉಪಾಧ್ಯಕ್ಷ: ಸುಭಾಸ ಮಾಳಗಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಕಿರಿಯರು ಎನಿಸಿದ್ದಾರೆ. ಇವರು ಬ್ಯಾಡಗಿಯ ಮಾಜಿ ಶಾಸಕ ಮರಿಯಪ್ಪ ಮಾಳಗಿ ಅವರ ಮೊಮ್ಮಗ. ರಾಜಕಾರಣ ಕುಟುಂಬದಿಂದ ಬೆಳೆದು ಬಂದ ಸುಭಾಸ ರಾಷ್ಟ್ರಮಟ್ಟದ ಕಬ್ಬಡಿ ಕ್ರೀಡಾಪಟುವಾಗಿ ಮಿಂಚಿದ್ದರು.

ಸುರೇಶಗೌಡ್ರ ಪಾಟೀಲ, ಶಾಸಕ ಬಸವರಾಜ ಶಿವಣ್ಣನವರ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಚಂದ್ರಪ್ಪ ಶೆಟ್ಟರ, ಶಿವಯೋಗಿ ಅಂಗಡಿ, ಈರಣ್ಣ ಬಣಕಾರ, ವಿನಯ ಹಿರೇಮಠ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಶಂಕರ ಕುಸಗೂರು, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಇದ್ದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಬ್ಬರನ್ನು ವಾಹನದಲ್ಲಿ ಮೆರವಣಿಗೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net