ಮಕ್ಕಳಿಗೆ ಅಗತ್ಯ ಮೌಲ್ಯಾಧಾರಿತ ಶಿಕ್ಷಣ : ಅಜಯ್ ಪುರುಷೋತ್ತಮ ಶೆಟ್ಟಿ ಹೇಳಿಕೆ

42
Published on

ಕಿನ್ನಿಗೋಳಿ: ಮಕ್ಕಳಿಗೆ ಪಾಠದ ಜತೆಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ಬಾಲವಿಕಾಸ ಶಿಬಿರ ಸಂಸ್ಕಾರ ಕಲಿಸುವ ಉತ್ತಮ ವೇದಿಕೆ ಎಂದು ಉಡುಪಿಯ ಉಜ್ವಲ್ ಗ್ರೂಪ್ ಆಡಳಿತ ನಿರ್ದೇಶಕ ಅಜಯ್ ಪುರುಷೋತ್ತಮ ಶೆಟ್ಟಿ ಹೇಳಿದರು.

ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ, ಮೂಲ್ಕಿ ಜನ ವಿಕಾಸ ಸಮಿತಿ ಸಹಕಾರದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಪುನರೂರು ಶ್ರೀ ವಿಶ್ವನಾಥ ದೇವಳ ಸಭಾಂಗಣದಲ್ಲಿ ಉಚಿತವಾಗಿ ಆಯೋಜಿಸಿದ ಬಾಲ ವಿಕಾಸ ಶಿಬಿರ-2025ರ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಪುನರೂರು ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ವಿಜಯ ಕಾಲೇಜು ಮೂಲ್ಕಿಯ ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಅರುಣಾ, ಪುನರೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಮೂಲ್ಕಿ ಜನವಿಕಾಸ ಸಮಿತಿ ಅಧ್ಯಕ್ಷ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಸುರೇಶ್ ರಾವ್ ನೀರಳಿಕೆ, ದಾಮೋದರ ಶೆಟ್ಟಿ ಕೊಡೆತ್ತೂರು, ಆನಂದ ಮೇಲಾಂಟ, ಗೀತಾ ಶೆಟ್ಟಿ, ಶೋಭಾ ರಾವ್ ಉಪಸ್ಥಿತರಿದ್ದರು. ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

ನೆನಪಿನ ಕಾಣಿಕೆ, ಪ್ರಮಾಣಪತ್ರ ವಿತರಣೆ

ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಖ್ಯಾತ ಯೋಗ ಗುರು ಜಯ ಮುದ್ದು ಶೆಟ್ಟಿ, ಶ್ಲೋಕ ಕಂಠಪಾಠ ಮಾಡಿಸಿದ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ, ಅಭಿನಯ ತರಬೇತಿ ನೀಡಿದ ರಂಗನಟ, ನಿರ್ದೇಶಕ ತಾರನಾಥ ಊರ್ವ, ಆವೆ ಮಣ್ಣಿನ ಕಲಾಕೃತಿ ರಚನೆ ಮತ್ತು ಕರಕುಶಲ ತರಬೇತಿ ನೀಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಿ ಫಲಿಮಾರು, ಭಜನೆ ತರಬೇತಿ ನೀಡಿದ ಖ್ಯಾತ ಗಾಯಕ ಸುರೇಶ್ ಆಚಾರ್ಯ ಹಳೆಯಂಗಡಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡ 102 ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಮಾಣಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net