ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಬಕ್ರೀದ್

17 ckm 4
ಚಿಕ್ಕಮಗಳೂರು ಕೆಂಪನಹಳ್ಳಿಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Published on

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸೇರಿದಂತೆ ಕಾಫಿ ನಾಡಿನಾದ್ಯಂತ ಸೋಮವಾರ ಬಕ್ರೀದ್ ಆಚರಣೆ ನಡೆಯಿತು. ಮುಸ್ಲಿಂ ಸಮುದಾಯದವರು, ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ತಾಜಾರಿನ್, ಸಂಗೀನಾ, ನೆಹರು ನಗರದ ಬದ್ರಿಯಾ, ಉಪ್ಪಳ್ಳಿಯ ಶಾದ್ರುಲಿ, ಕಲ್ಲುದೊಡ್ಡಿಯ ಅಮ್ಜದ್ ಖಾರಾರ್ ಹಾಗೂ ಆದಿಶಕ್ತಿ ನಗರದ ಮಸೀದಿಗಳಲ್ಲಿ ಬ್ಯಾರಿ ಸಮುದಾಯದವರು ಬೆಳಗ್ಗೆ ೮ ಗಂಟೆಯ ವೇಳೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ೧೦ಗಂಟೆಯ ವೇಳೆಗೆ ಮುಸ್ಲಿಂ ಸಮುದಾಯದವರು ಚಿಕ್ಕಮಗಳೂರಿನ ವಿಜಯಪುರ ಹಾಗೂ ಕೆಂಪನಹಳ್ಳಿಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಂಪನಹಳ್ಳಿಯ ಈದ್ಗಾ ಮೈದಾನಕ್ಕೆ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರು ಭೇಟಿ ನೀಡಿ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲರೂ ಕೂಡ ಜಾತಿ, ಧರ್ಮವನ್ನು ಬದಿಗಿಟ್ಟಿ ಸೌಹಾರ್ದತೆಯಿಂದ ಬಾಳಬೇಕು. ಇದು, ಸಂವಿಧಾನದ ಆಶಯವಾಗಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಮದಶೀರ್, ವಕ್ಫ್ ಬೋರ್ಡ್ ಅಧ್ಯಕ್ಷ ಶಾಹೀದ್ ರಜ್ವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net