

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಸ್ಲಿಮರ ಪ್ರಮುಖ ಹಬ್ಬವಾದ ಬಕ್ರೀದ್‌ಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ಕುರಿಮೇಕೆಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕುರಿ-ಮೇಕೆಗಳ ದರವೂ ದುಬಾರಿಯಾಗಿದೆ. ಸಾಮಾನ್ಯವಾಗಿ ಏಳೆಂಟು ಸಾವಿರ ರೂಪಾಯಿಗೆ ಸಿಗುತ್ತಿದ್ದ ಕುರಿಮೇಕೆಗಳು ಹತ್ತೆನ್ನೆರಡು ಸಾವಿರ ರೂಪಾಯಿ ಕೊಟ್ಟರೂ ಸಿಗುವುದಿಲ್ಲ ಎಂಬಂತಾಗಿದೆ.
ಸಂತೆಗಳಲ್ಲಿ ಕುರಿಗಳ ಭರಾಟೆ:
ಜಿಲ್ಲೆಯ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಸಂತೆ ಕುರಿ ಮೇಕೆಗಳ ವ್ಯಾಪಾರದಲ್ಲಿ ಪ್ರಸಿದ್ದಿ ಪಡೆದಿದೆ. ಬಕ್ರಿದ್ ಹಬ್ಬ ಇನ್ನೂ ವಾರವಿರುವಾಗಲೇ ಕುರಿಮೇಕೆಗಳ ಮುಂಗಡ ಬುಕ್ಕಿಂಗ್ ಜೋರಾಗಿದೆ. ಈ ಸಂತೆಯಲ್ಲಿ ಪ್ರತಿ ವರ್ಷ ಕುರಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಅದೇ ರೀತಿ ಈ ಬಾರಿಯೂ ಸಾವಿರಾರು ಸಂಖ್ಯೆಯಲ್ಲಿ ಕುರಿಗಳ ಜಮಾವಣೆಯಾಗಿದ್ದು, ಖರೀದಿದಾರರು ಮುಗಿಬಿದ್ದಿರುವ ದೃಶ್ಯ ಕಂಡುಬರುತ್ತಿದೆ. ಜೋಡಿ ಕುರಿಗಳು ಏನೆಲ್ಲವೆಂದರೂ 25ರಿಂದ 30 ಸಾವಿರ ರೂಪಾಯಿವರೆಗೆ ಬಿಕರಿಯಾಗುತ್ತಿವೆ. ಈ ಹಬ್ಬವನ್ನೂ ಮುಸ್ಲಿಂ ಸಮುದಾಯದ ಪ್ರತಿಯೊಬ್ಬರೂ ಭರ್ಜರಿಯಾಗಿ ಆಚರಿಸುವುದರಿಂದ ಕುರಿ-ಮೇಕೆಗಳ ಮಾಂಸಕ್ಕೆ ಡಿಮಾಂಡ್ ಹೆಚ್ಚಾಗಿದೆ. ಈಗಾಗಲೇ ಚಿಲ್ಲರೆ ಮಾಂಸದ ದರವೂ ಗಗನಮುಖಿಯಾಗಿದೆ. ಎಲ್ಲ ಕಡೆಗಳಲ್ಲಿ ಕುರಿ-ಮೇಕೆಗಳು ಬುಕಿಂಗ್ ಆಗಿರುವುದರಿಂದ ಮಾಂಸಕ್ಕೆ ಕುರಿ-ಮೇಕೆಗಳು ಸಿಗುತ್ತಿಲ್ಲ ಎಂಬ ಮಾತು ಮಾಂಸ ಮಾರಾಟ ಅಂಗಡಿಗಳಲ್ಲಿ ಕೇಳಿಬರುತ್ತಿವೆ.
ವಿವಿಧ ತಳಿಗಳ ಕುರಿಗಳ ಜಮಾವಣೆ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿವಿಧ ತಳಿಗಳ ಕುರಿಗಳು ಜಮಾವಣೆಯಾಗಿವೆ. ಇದರಲ್ಲಿ ಬನ್ನೂರು ಕುರಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಜತೆಗೆ ಬಳ್ಳಾರಿ, ಮಹಾರಾಷ್ಟ್ರಗಳ ಕುರಿಗಳು ಇವಕ್ಕೆ ಪೈಪೋಟಿ ನೀಡುತ್ತಿವೆ. ಅದರಲೂಮಹಾರಾಷ್ಟ್ರದ ಶಿರಡಿಯಿಂದ ತಂದಿರುವ ‘ದುಂಬಾ ಬಕರಾ’ ಉದ್ದಬಾಲಕ ಕುರಿಗೆ ಹೆಚ್ಚಿನ ಬೇಡಿಕೆ ಇದೆ. ಮಾಗಡಿ ಭಾಗದ ನಾಟಿ ಕುರಿ, ಮಳ್ಳವಳ್ಳಿ, ಕೊಳ್ಳೆಗಾಲದ ಭಾಗದ ಮಜಭೂತದಾದ ಕುರಿಗಳು ತಮ್ಮ ಬೇಡಿಕೆಯನ್ನೇ ಹಾಗೇ ಉಳಿಸಿಕೊಂಡಿವೆ. ಜತೆಗೆ ಜಮಖಂಡಿ, ಬಾಗಲಕೋಟೆಯ ಅಮಿನಗಡ, ರಾಯಭಾಗದಿಂದಲೂ ಕುರಿಯಗಳು ಜಮಾವಣೆಗೊಂಡಿವೆ.
ಗ್ರಾಹಕರ ಸೆಳೆಯಲು ತಂತ್ರ:ಗ್ರಾಹಕರನ್ನು ಸೆಳೆಯಲು ಕುರಿ ವ್ಯಾಪಾರಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಟಗರುಗಳ ಕೊಂಬಿಗೆ ವಿವಿಧ ಬಣ್ಣಗಳನ್ನು ಬಳಿಯಲಾಗಿದೆ. ತುಪ್ಪಟಗಳ ಮೇಲೆ ವಿವಿಧ ಚಿತ್ತಾರಗಳನ್ನು ಬಿಡಿಸುವುದು, ದೊಡ್ಡ ಕುರಿ-ಮೇಕೆಗಳ ಕುತ್ತಿಗೆಗೆ ಘಂಟೆ ಕಟ್ಟುವುದು, ಕಾಲಿಗೆ ಗೆಜ್ಜೆ ಮಾದರಿಯ ವಸ್ತುಗಳಿಂದ ಅಲಂಕರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇನ್ನು ಕೆಲವು ಕುರಿಗಳಿಗೆ ಹಿಂದಿ ಸಿನಿಮಾ ನಟ-ನಟಿಯರ ಹೆಸರನ್ನು ಇಟ್ಟು, ಗ್ರಾಹಕರ ಮುಂದೆ ಹೆಸರು ಕರೆಯುವ ಗಿಮಿಕ್ ಸಹ ನಡೆಯುತ್ತಿದೆ. ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯಹುದಾದ ಪ್ರಾಣಿಗಳ ಅಕ್ರಮ ಸಾಗಣೆ, ವ್ಯಾಪಾರ ಮತ್ತು ಹತ್ಯೆ ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ ಶಾಂತಿ ಸಭೆಗಳನ್ನು ನಡೆಸಿರುವ ಪೊಲೀಸರು ಬಕ್ರೀದ್ ಆಚರಣೆ ಜತೆಗೆ ಜಾನುವಾರು ಅಕ್ರಮ ಸಾಗಣೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಕಳ್ಳಸಾಗಣೆಗೆ ಸಹಕರಿಸುವ ಸಾರ್ವಜನಿಕರ ವಿರುದ್ಧವೂ ಪ್ರಕರಣ ದಾಖಲಿಸುವ ಮುನ್ನೆಚ್ಚರಿಕೆ ರವಾನಿಸಿದ್ದಾರೆ.
ಗಾಯವಾದ ಕುರಿ ಬಲಿ ನೀಡಲಾಗುವುದಿಲ್ಲ, ಯಾವುದಾದರೂ ಅಂಗ ಊನವಾದರೆ ಬಲಿಗೆ ಅನರ್ಹವಾಗಿರುತ್ತದೆ. ಅಲ್ಲದೆ ರೋಗಗ್ರಸ್ಥವಾಗಿರುವ ಕುರಿಯನ್ನೂ ಬಲಿ ನೀಡುವುದಿಲ್ಲ, ಕುರಿಯ ಕೊಂಬು ಮುರಿದಿದ್ದರೂ ಬಲಿಗೆ ಅನರ್ಹವಾಗಿರುತ್ತದೆ. ಆದ್ದರಿಂದ ಎಲ್ಲ ರೀತಿಯಲ್ಲೂ ಆರೋಗ್ಯಕರವಾಗಿರುವ ಕುರಿಗಳಿಗೆ ಡಿಮಾಂಡ್ ಸೃಷ್ಟಿಯಾಗಿದೆ. ಮಳೆಗಾಲವಾಗಿರುವುದರಿಂದ ಕುರಿ-ಮೇಕೆಗಳನ್ನು ಶೀತದಿಂದ ರಕ್ಷಿಸಬೇಕು, ಸಣ್ಣ ಗಾಯವೂ ಆಗದಂತೆ ನೋಡಿಕೊಳ್ಳಬೇಕು ಇದೊಂದು ಸವಾಲಿನ ಕೆಲಸವಾಗಿದೆ.
ಇಮ್ರಾನ್, ಕುರಿ ವ್ಯಾಪಾರಿ